ಲಿಂಗಸುಗೂರು: ಪಟ್ಟಣದಲ್ಲಿ ಸ್ವಚ್ಛ ಭಾರತ ಅಭಿಯಾನ 2.0 ಯೋಜನೆಯಡಿ ‘ಸ್ವಚ್ಛತೆಯೇ ಸೇವೆ-2026’ ಕಾರ್ಯಕ್ರಮದ ಅಂಗವಾಗಿ ವಾರ್ಡ್ ನಂ.18ರಲ್ಲಿ ಸಾರ್ವಜನಿಕರಿಗೆ ಮನೆಯಲ್ಲಿಯೇ ಹಸಿ ತ್ಯಾಜ್ಯದಿಂದ ಗೊಬ್ಬರ ತಯಾರಿಸುವ (ಹೋಮ್ ಕಾಂಪೋಸ್ಟಿಂಗ್) ಕುರಿತು ತರಬೇತಿ ನೀಡಲಾಯಿತು.

ಅಕ್ಕ ಕೆಫೆ ಸಮೀಪ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಅಕ್ಕ ಕೆಫೆಯ ಅಡುಗೆ ಸಿಬ್ಬಂದಿ ಹಾಗೂ ಸಮುದಾಯ ಸಂಚಾಲಕಿಯರ ಸಮ್ಮುಖದಲ್ಲಿ ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ಸೊಪ್ಪು, ತರಕಾರಿ ಮತ್ತು ಹಣ್ಣುಗಳ ತ್ಯಾಜ್ಯವನ್ನು ಬಳಸಿಕೊಂಡು ಸಾವಯವ ಗೊಬ್ಬರ ತಯಾರಿಸುವ ವಿಧಾನವನ್ನು ಪ್ರಾಯೋಗಿಕವಾಗಿ ತಿಳಿಸಿಕೊಡಲಾಯಿತು.

ಸೆ.17ರಿಂದ ಅ.2ರವರೆಗೆ ನಡೆಯುವ ‘ಸ್ವಚ್ಛತೆಯೇ ಸೇವೆ’ ಅಭಿಯಾನದ ಮಹತ್ವ, ಉದ್ದೇಶ ಹಾಗೂ ಚಟುವಟಿಕೆಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಪ್ರತಿಯೊಬ್ಬರೂ ಮನೆಯ ಹಸಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ, ಮನೆಯಲ್ಲಿಯೇ ಗೊಬ್ಬರವಾಗಿ ಪರಿವರ್ತಿಸಿ ಗಿಡಗಳಿಗೆ ಬಳಸುವಂತೆ ತಿಳಿಸಲಾಯಿತು.

ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ಗಿಡಮರಗಳನ್ನು ಉಳಿಸಿ ಬೆಳೆಸುವ ಮೂಲಕ ಸ್ವಚ್ಛ ಮತ್ತು ಹಸಿರು ಪರಿಸರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಲಾಯಿತು.

ಈ ಸಂದರ್ಭದಲ್ಲಿ ಸೌಮ್ಯ ವಸ್ತ್ರದ, ಅನ್ನಪೂರ್ಣ, ಮಾನಸ, ಗೀತಾ, ಶಶಿಕಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.