ಹಟ್ಟಿ ಚಿನ್ನದ ಗಣಿ, ಸೆ.25: ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾಮನಕಲ್ಲೂರು ಕ್ರಾಸ್ ಸಮೀಪದ ಬಸವ ಜ್ಯೋತಿ ನಗರದಲ್ಲಿ ಕಳೆದ ಸುಮಾರು 30 ವರ್ಷಗಳಿಂದ ವಾಸಿಸುತ್ತಿರುವ ಸುಡುಗಾಡು ಸಿದ್ಧ ಸಮುದಾಯದ ನಿವಾಸಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ತುರ್ತಾಗಿ ಕಲ್ಪಿಸಬೇಕು ಎಂದು ಅಲೆಮಾರಿ ಜಾಗೃತ ಸಂಘ ಒತ್ತಾಯಿಸಿದೆ.

ಈ ಸಂಬಂಧ ಸಂಘದ ಅಧ್ಯಕ್ಷ ಬಸವರಾಜ ಹಟ್ಟಿ ಹಾಗೂ ಉಪಾಧ್ಯಕ್ಷ ಗಂಗಾಧರ್ ಶಂಖು ನೇತೃತ್ವದ ನಿಯೋಗವು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿತು. ಮನವಿ ಸ್ವೀಕರಿಸಿದ ಪಂಚಾಯತ್ ಕರ ವಸೂಲಿ ಅಧಿಕಾರಿ ಅಕ್ರಮ್ ಅವರು, ವಾರದೊಳಗೆ ಸಮಸ್ಯೆಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪರಿಶಿಷ್ಟ ಜಾತಿಯ ಅಲೆಮಾರಿ ಪಟ್ಟಿಗೆ ಸೇರಿದ ಸುಡುಗಾಡು ಸಿದ್ಧ ಸಮುದಾಯದವರು ಬಸವ ಜ್ಯೋತಿ ನಗರದಲ್ಲಿ ಸುಮಾರು ಮೂರು ದಶಕಗಳಿಂದ ನೆಲೆಸಿದ್ದಾರೆ. ಆದರೆ ಇಂದಿಗೂ ಕಾಲೋನಿಯಲ್ಲಿ ಅಗತ್ಯ ಮೂಲಸೌಕರ್ಯಗಳ ಕೊರತೆ ಮುಂದುವರಿದಿದ್ದು, ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಸೇರಿದಂತೆ ನಿವಾಸಿಗಳು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ ಎಂದು ನಿಯೋಗ ದೂರಿತು.

ಕುಡಿಯುವ ನೀರು, ಮಹಿಳಾ ಶೌಚಾಲಯ, ಚರಂಡಿ ವ್ಯವಸ್ಥೆ, ಗುಮ್ಮಿ ದುರಸ್ತಿ, ಸೊಳ್ಳೆ ನಿಯಂತ್ರಣ, ಬೀದಿ ದೀಪಗಳ ಅಳವಡಿಕೆ ಹಾಗೂ ರಸ್ತೆ ಬದಿಯಲ್ಲಿ ಬೆಳೆದಿರುವ ಗಿಡಗಂಟಿಗಳ ತೆರವು ಸೇರಿದಂತೆ ಹಲವು ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಲ್ಪಿಸಬೇಕಾಗಿದೆ. ಇವು ಸಾರ್ವಜನಿಕ ಆರೋಗ್ಯ, ಸ್ವಚ್ಛತೆ ಹಾಗೂ ನಿವಾಸಿಗಳ ಸುರಕ್ಷತೆಗೆ ನೇರವಾಗಿ ಸಂಬಂಧಿಸಿದ ಸಮಸ್ಯೆಗಳಾಗಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಬಸವ ಜ್ಯೋತಿ ನಗರಕ್ಕೆ ಖುದ್ದಾಗಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಬೇಕು. ತುರ್ತು ಸಮಸ್ಯೆಗಳನ್ನು ಒಂದು ವಾರದೊಳಗೆ ಹಾಗೂ ಉಳಿದ ಮೂಲಭೂತ ಸಮಸ್ಯೆಗಳನ್ನು ಗರಿಷ್ಠ 15 ದಿನಗಳೊಳಗೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಘ ಆಗ್ರಹಿಸಿದೆ.

ನಿವಾಸಿಗಳ ಸಮಸ್ಯೆಗಳಿಗೆ ನಿಗದಿತ ಅವಧಿಯಲ್ಲಿ ಸ್ಪಂದಿಸದಿದ್ದರೆ, ಸಾರ್ವಜನಿಕರ ಮೂಲಭೂತ ಹಕ್ಕುಗಳಿಗಾಗಿ ಸಂಬಂಧಪಟ್ಟ ಮೇಲಾಧಿಕಾರಿಗಳ ಗಮನಕ್ಕೆ ವಿಷಯವನ್ನು ಕೊಂಡೊಯ್ಯಲಾಗುವುದು. ಅಗತ್ಯಬಿದ್ದರೆ ಪಟ್ಟಣ ಪಂಚಾಯತ್ ಕಚೇರಿ ಎದುರು ಬೃಹತ್ ಪ್ರತಿಭಟನೆ ಸೇರಿದಂತೆ ಕಾನೂನುಬದ್ಧ ಹಾಗೂ ಶಾಂತಿಯುತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘದ ಪದಾಧಿಕಾರಿಗಳು ಎಚ್ಚರಿಸಿದರು.

ನಿಯೋಗದಲ್ಲಿ ನಿವಾಸಿಗಳಾದ ಮಲ್ಲಿಕಾರ್ಜುನ ಶಂಖು, ಈರೇಶ (ಚಿಟ್ಟಿ), ರವಿಕುಮಾರ್, ಗೋಪಾಲ, ಶೇಖರ್, ನಾಗಲಿಂಗ ಸೇರಿದಂತೆ ಇತರರು ಉಪಸ್ಥಿತರಿದ್ದರು.