ದೇವದುರ್ಗ: ದಾಸ ಸಾಹಿತ್ಯವು ಹರಿ ಚಿಂತನೆಯ ಸಾಹಿತ್ಯವಾಗಿದ್ದು, ಮಾನವನ ಹುಟ್ಟು-ಸಾವು, ಜೀವಾತ್ಮ-ಪರಮಾತ್ಮ ಹಾಗೂ ಬದುಕಿನ ನಶ್ವರತೆಯ ಕುರಿತು ಸಂದೇಶ ನೀಡುವುದರ ಜೊತೆಗೆ ಧಾರ್ಮಿಕ ಚಿಂತನೆ ಮತ್ತು ಭಗವಂತನ ಸಾಕ್ಷಾತ್ಕಾರದ ಮಾರ್ಗವನ್ನು ತೋರಿಸುತ್ತದೆ ಎಂದು ಉಪನ್ಯಾಸಕ ಸಿದ್ದಪ್ಪ ಕಂಬಳಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ರಾಯಚೂರು ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ದೇವದುರ್ಗ ವತಿಯಿಂದ ಪಟ್ಟಣದ ಬಸವೇಶ್ವರ ಡಿ.ಎಡ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ದತ್ತಿ ನಿಧಿ ಕಾರ್ಯಕ್ರಮದಲ್ಲಿ ‘ದಾಸ ಸಾಹಿತ್ಯ’ ಕುರಿತು ಅವರು ಉಪನ್ಯಾಸ ನೀಡಿದರು.

ದಾಸ ಸಾಹಿತ್ಯವು ಪಾರಮಾರ್ಥಿಕ ಹಾಗೂ ಅಲೌಕಿಕ ಬದುಕಿನ ಮೌಲ್ಯಗಳನ್ನು ಸಾರುವ ಸಾಹಿತ್ಯವಾಗಿದೆ. ಕನಕದಾಸರು, ಪುರಂದರದಾಸರು, ವಿಠ್ಠಲದಾಸರು ಸೇರಿದಂತೆ ಅನೇಕ ಹರಿದಾಸರು ಜಾತಿ-ಧರ್ಮದ ಭೇದವಿಲ್ಲದೆ ಮನುಕುಲಕ್ಕೆ ಮುಕ್ತಿಮಾರ್ಗದ ಸಂದೇಶ ನೀಡಿದ್ದಾರೆ. ದೇವದುರ್ಗ ತಾಲೂಕಿನ ಮೊಸರುಕಲ್ ಗೋಪಾಲದಾಸರು, ರಾಮದಾಸರು ಹಾಗೂ ಮಾನ್ವಿಯ ಜಗನ್ನಾಥದಾಸರು ದಾಸ ಪರಂಪರೆಯ ಶ್ರೇಷ್ಠ ಸಾಧಕರಾಗಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯ ತತ್ವಪದಕಾರರಾದ ಗೂಗಲ್ ಪರಪ್ಪಯ್ಯ, ಗಬ್ಬೂರು ಹಂಪಣ್ಣ, ಆದಿ ಅಮಾತ್ಯಪ್ಪ, ಮಾರ್ತಾಂಡಪ್ಪ, ಹನುಮಂತರಾವ್ ಸೇರಿದಂತೆ ಹಲವರು ಭಕ್ತಿ, ಭಜನೆ ಮತ್ತು ತತ್ವಪದಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ದತ್ತಿ ಉಪನ್ಯಾಸಕರಾಗಿ ಮಾತನಾಡಿದ ಮಲ್ಲೇಶ್ವರಯ್ಯ ನೂಲಿ, ಜನಪದ ಸಾಹಿತ್ಯವು ಜನರ ಬದುಕಿನಿಂದಲೇ ಹುಟ್ಟಿ, ಬಾಯಿಂದ ಬಾಯಿಗೆ ಬೆಳೆದು ಬಂದ ಸಾಂಸ್ಕೃತಿಕ ಪರಂಪರೆಯಾಗಿದೆ ಎಂದರು. ಸೋಬಾನೆ ಗೀತೆಗಳು, ತೊಟ್ಟಿಲು ಹಾಡುಗಳು, ಗ್ರಾಮೀಣ ಕ್ರೀಡೆಗಳು, ವೇಷಗಳು, ನಾಟಕಗಳು, ಮೊಹರಂ ಹಬ್ಬದ ಹಾಡುಗಳು, ಬೀಸುವ ಕಲ್ಲಿನ ಪದಗಳು, ಭಜನೆ ಪದಗಳು, ಬಯಲಾಟ ಹಾಗೂ ರಂಗನಾಟಕಗಳು ಜನಪದ ಸಾಹಿತ್ಯದ ಅಮೂಲ್ಯ ಕೊಡುಗೆಗಳಾಗಿವೆ ಎಂದು ಹೇಳಿದರು.

ಆಧುನಿಕ ತಂತ್ರಜ್ಞಾನ, ಟಿವಿ ಹಾಗೂ ಮೊಬೈಲ್ ಪ್ರಭಾವದಿಂದ ಜನಪದ ಸಾಹಿತ್ಯ, ಒಗಟುಗಳು ಮತ್ತು ಸಾಂಪ್ರದಾಯಿಕ ಕಲಾಪ್ರಕಾರಗಳು ನಿಧಾನವಾಗಿ ಕಣ್ಮರೆಯಾಗುತ್ತಿದ್ದು, ಅವುಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವುದು ಎಲ್ಲರ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಕೇಮಣ್ಣ ಪವರ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಶತಮಾನಕ್ಕೂ ಹೆಚ್ಚು ಕಾಲ ಕನ್ನಡ ನಾಡು-ನುಡಿ, ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಂಗೀತದ ಬೆಳವಣಿಗೆಗಾಗಿ ಶ್ರಮಿಸುತ್ತಿದೆ. ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ದೊರೆತಿರುವುದು ಹೆಮ್ಮೆಯ ಸಂಗತಿ ಎಂದರು. ಪ್ರಶಿಕ್ಷಣಾರ್ಥಿಗಳು ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಹಾಗೂ ಸಮುದಾಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.

ವೇದಿಕೆಯಲ್ಲಿ ದತ್ತಿದಾನಿಗಳಾದ ಭಾರತಿ ಗುರುಲಿಂಗಯ್ಯ ಕೋಡಿಮಠ, ಗಿರಿಜಮ್ಮ ಶಿಖರಮಠ, ಆದಿ ವಿಜಯಲಕ್ಷ್ಮಿ ಚಂದ್ರಶೇಖರ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಎಚ್. ಶಿವರಾಜ್ ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಬಸವರಾಜ್ ಕೊಪ್ಪರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತ್ಯನಾರಾಯಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಪ್ರಶಿಕ್ಷಣಾರ್ಥಿಗಳು, ಶಿಕ್ಷಕರು ಹಾಗೂ ಉಪನ್ಯಾಸಕ ಸಿಬ್ಬಂದಿ ಭಾಗವಹಿಸಿದ್ದರು.