ದೇವದುರ್ಗ, ಸೆ.25: ಕನಿಷ್ಠ ವೇತನ ಜಾರಿ, ಹೊರಗುತ್ತಿಗೆ ಪದ್ಧತಿ ರದ್ದು, ಖಾಯಂ ನೇಮಕಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ವಿವಿಧ ಇಲಾಖೆಗಳ ನೌಕರರು ಶುಕ್ರವಾರ ದೇವದುರ್ಗ ಶಾಸಕಿ ಕರಿಯಮ್ಮ ಜಿ. ನಾಯಕ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು.

ವಿಧಾನಸಭಾ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಾಸಕಿ ಕರಿಯಮ್ಮ ಜಿ. ನಾಯಕ ಅವರು ಬೆಂಗಳೂರಿನಲ್ಲಿ ಇದ್ದ ಕಾರಣ ಪ್ರತಿಭಟನಾ ಸ್ಥಳದಲ್ಲಿ ಹಾಜರಿರಲಿಲ್ಲ. ಪ್ರತಿಭಟನಾಕಾರರ ಮನವಿಯನ್ನು ಶಾಸಕರ ಪುತ್ರಿ ಗೌರಿ ಸ್ವೀಕರಿಸಿದರು.

ಈ ವೇಳೆ ಪ್ರತಿಭಟನಾ ಮುಖಂಡರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಶಾಸಕಿ ಕರಿಯಮ್ಮ ನಾಯಕ, “ನಾನು ವಿಧಾನಸಭಾ ಅಧಿವೇಶನದಲ್ಲಿ ಇದ್ದೇನೆ. ನಿಮ್ಮ ಮನವಿ ಪತ್ರವನ್ನು ನನ್ನ ಮಗಳು ಗೌರಿಗೆ ನೀಡಿ. ನಿಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು, ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ. ವಿಶೇಷವಾಗಿ ಎಲ್ಲ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಯಾಗಬೇಕು ಎಂಬ ವಿಷಯದ ಕುರಿತು ನಿಮ್ಮ ಪರವಾಗಿ ಸರ್ಕಾರದ ಮೇಲೆ ಒತ್ತಡ ತರುತ್ತೇನೆ” ಎಂದು ಭರವಸೆ ನೀಡಿದರು.

ಸಿಐಟಿಯು ಜಿಲ್ಲಾ ಕಾರ್ಯಕಾರಿ ಮಂಡಳಿ ಸದಸ್ಯ ಗಿರಿಯಪ್ಪ ಪೂಜಾರಿ ಮಾತನಾಡಿ, ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಕಲ್ಪಿಸಬೇಕು, ಕನಿಷ್ಠ ವೇತನ ಜಾರಿಗೊಳಿಸಬೇಕು, ಆಶಾ, ಅಂಗನವಾಡಿ, ಬಿಸಿಯೂಟ ಸೇರಿದಂತೆ ವಿವಿಧ ವಲಯಗಳ ನೌಕರರ ವೇತನ ಹೆಚ್ಚಿಸಬೇಕು ಹಾಗೂ ಇಎಸ್‌ಐ, ಪಿಎಫ್, ಗ್ರಾಚ್ಯುಟಿ ಮತ್ತು ಬೋನಸ್ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಕಾರ್ಮಿಕರಿಗೆ ವಸತಿ ಸೌಲಭ್ಯ ಹಾಗೂ ವಿವಿಧ ಇಲಾಖೆಗಳ ಹೊರಗುತ್ತಿಗೆ ನೌಕರರ ಬೇಡಿಕೆಗಳನ್ನು ಸರ್ಕಾರ ಆದ್ಯತೆಯಿಂದ ಪರಿಗಣಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರಮಾದೇವಿ, ಹೈದರ್ ಅಲಿ, ಮರಿಯಮ್ಮ, ಶ್ರೀಲೇಖಾ, ಪಾಂಡುರಂಗ ನಾಯಕ, ಪಂಚಯ್ಯ, ಶೋಭಾ, ಈಶಮ್ಮ, ವೆಂಕಟೇಶ, ರಂಗನಾಥ ಸೇರಿದಂತೆ ವಿವಿಧ ಇಲಾಖೆಗಳ ಹೊರಗುತ್ತಿಗೆ ನೌಕರರು ಭಾಗವಹಿಸಿದ್ದರು.