ಹಟ್ಟಿ ಚಿನ್ನದ ಗಣಿ, ಸೆ.25: ಸಮೀಪದ ಕೋಠಾ ಗ್ರಾಮದಲ್ಲಿರುವ ಕಲ್ಯಾಣ ಚಾಲುಕ್ಯರ ಕಾಲದ ಕ್ರಿ.ಶ. 12ನೇ ಶತಮಾನದ ಐತಿಹಾಸಿಕ ಶ್ರೀ ರಾಮಲಿಂಗೇಶ್ವರ ದೇವಸ್ಥಾನಕ್ಕೆ ಮೈಸೂರಿನ ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಸಹಾಯಕ ಅಭಿಯಂತರ ಸತೀಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದೇವಸ್ಥಾನದ ಸ್ಥಾಪನೆಯ ಕಾಲ, ವಾಸ್ತುಶಿಲ್ಪ, ಐತಿಹಾಸಿಕ ಮಹತ್ವ ಹಾಗೂ ಅಲ್ಲಿರುವ ಶಾಸನಗಳ ಕುರಿತು ಮಾಹಿತಿ ಪಡೆದ ಅವರು, ಗರ್ಭಗುಡಿ, ಕಂಬಗಳು, ಮೇಲ್ಛಾವಣಿ ಸೇರಿದಂತೆ ಹಾನಿಗೊಳಗಾಗಿರುವ ವಿವಿಧ ಭಾಗಗಳನ್ನು ವೀಕ್ಷಿಸಿದರು. ದೇವಸ್ಥಾನದ ಪ್ರಸ್ತುತ ಸ್ಥಿತಿ, ಪುನಶ್ಚೇತನ ಹಾಗೂ ಸಂರಕ್ಷಣೆಯ ಅಗತ್ಯತೆ ಕುರಿತು ಸ್ಥಳೀಯರಿಂದ ಸಮಗ್ರ ಮಾಹಿತಿ ಪಡೆದುಕೊಂಡರು.

ಇತಿಹಾಸಾಸಕ್ತ ಅಶೋಕ ನಾಯಕ ದಿದ್ದಗಿ ಅವರು ಈ ಹಿಂದೆ ಗ್ರಾಮದ ಮುಖಂಡರು ಹಾಗೂ ಸ್ಥಳೀಯರಿಗೆ ದೇವಸ್ಥಾನದ ಐತಿಹಾಸಿಕ ಮಹತ್ವದ ಕುರಿತು ಮಾಹಿತಿ ನೀಡಿ, ಅದರ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಮುಂದಾಗುವಂತೆ ಮನವಿ ಮಾಡಿದ್ದರು. ಅದರಂತೆ ಗ್ರಾಮಸ್ಥರು ಸೆ.21ರಂದು ಮೈಸೂರಿನ ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ದೇವಾಲಯವನ್ನು ಇಲಾಖೆಯ ಅಧೀನಕ್ಕೆ ಪಡೆದು ಸಂರಕ್ಷಿಸಿ ಅಭಿವೃದ್ಧಿಪಡಿಸುವಂತೆ ಕೋರಿದ್ದರು.

ಗ್ರಾಮಸ್ಥರ ಮನವಿಗೆ ಸ್ಪಂದಿಸಿ ದೇವಸ್ಥಾನಕ್ಕೆ ಭೇಟಿ ನೀಡಿದ ಅಧಿಕಾರಿಗಳು, ದೇವಾಲಯದ ಪುನಶ್ಚೇತನ ಮತ್ತು ಅಭಿವೃದ್ಧಿಗೆ ಸಂಬಂಧಿಸಿ ಜಿಲ್ಲೆಯ ಸಚಿವರು, ಶಾಸಕರು ಹಾಗೂ ಸಂಸದರಿಗೆ ಪತ್ರ ಬರೆದು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಶಾಸಕರ ಅನುದಾನ ಸೇರಿದಂತೆ ವಿವಿಧ ಮೂಲಗಳಿಂದ ಹಂತ ಹಂತವಾಗಿ ಅಭಿವೃದ್ಧಿ ಕೈಗೊಳ್ಳುವ ಕುರಿತು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಶಿವಣ್ಣ ನಾಯಕ, ವಿಶ್ವನಾಥ್ ನಂದಿಕೋಲು ಮಠ, ಅಮರೇಗೌಡ ಮಾಲಿಪಾಟೀಲ್, ಅಂಬರೀಶ್ ಶೆಡ್ಲಿಗೆ, ಬಸನಗೌಡ ಪೊಲೀಸ್ ಪಾಟೀಲ್, ರಾಜಾಲಿಂಗ ರಾಜ್ ನಾಯಕ, ಮೌನೇಶ್ ಕರ್ಕಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.