ಹಟ್ಟಿ ಚಿನ್ನದ ಗಣಿ: ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಪದೇ ಪದೇ ಭರವಸೆ ನೀಡುತ್ತಿರುವ ಸಿಐಟಿಯು ಸಂಘಟನೆ ಅವುಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಫಲವಾಗಿದ್ದು, ಅದು ‘ಸುಳ್ಳಿನ ಫ್ಯಾಕ್ಟರಿ’ಯಂತಾಗಿದೆ ಎಂದು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಆರೋಪಿಸಿದರು.
ಸ್ಥಳೀಯ ಅರವಿಂದ ಮಳೆಬೆನ್ನೂರು ಗ್ರಂಥಾಲಯದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಾರೋಗ್ಯದ ಕಾರಣದಿಂದ ಕೆಲಸ ನಿರ್ವಹಿಸಲು ಸಾಧ್ಯವಾಗದ ಕಾರ್ಮಿಕರ ಅನುಕೂಲಕ್ಕಾಗಿ ವೈದ್ಯಕೀಯ ಅನರ್ಹತೆ (ಮೆಡಿಕಲ್ ಅನ್ಫಿಟ್) ಯೋಜನೆ ಜಾರಿಗೊಳಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ಈ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರದಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದ್ದು, ಸೆ.29ರಂದು ಗಣಿಗಾರಿಕೆ ಬಂದ್ಗೆ ಕರೆ ನೀಡಲಾಗಿದೆ ಎಂದರು.
ಈ ಹಿಂದೆ ಸೆ.22 ಹಾಗೂ 25ರಂದು ಕಂಪನಿ ಬಂದ್ ಮಾಡುವುದಾಗಿ ಸಿಐಟಿಯು ಮುಖಂಡರು ಹೇಳಿದ್ದರೂ ಕೊನೆಯ ಕ್ಷಣದಲ್ಲಿ ನಿರ್ಧಾರದಿಂದ ಹಿಂದೆ ಸರಿದಿದ್ದರು. ಹೀಗಾಗಿ ಸೆ.29ರಂದು ಘೋಷಿಸಿರುವ ಬಂದ್ನ್ನಾದರೂ ನಡೆಸುತ್ತಾರೆಯೇ ಅಥವಾ ಮತ್ತೊಮ್ಮೆ ಹಿಂದೆ ಸರಿಯುತ್ತಾರೆಯೇ ಎಂಬ ಅನುಮಾನ ಕಾರ್ಮಿಕರಲ್ಲಿ ಮೂಡಿದೆ ಎಂದು ಹೇಳಿದರು.
ಚುನಾವಣೆ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದ ಮೂರು ತಿಂಗಳೊಳಗೆ ಕಾರ್ಮಿಕರಿಗೆ ಮೆಡಿಕಲ್ ಅನ್ಫಿಟ್ ಯೋಜನೆ ಜಾರಿಗೊಳಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ 16 ತಿಂಗಳು ಕಳೆದರೂ ಈ ಬೇಡಿಕೆಯನ್ನು ಈಡೇರಿಸುವಲ್ಲಿ ಸಂಘ ವಿಫಲವಾಗಿದೆ ಎಂದು ಚಂದ್ರಶೇಖರ್ ಟೀಕಿಸಿದರು.
ಗಣಿ ಕಂಪನಿಗೆ ಸುಮಾರು ₹8.70 ಕೋಟಿ ನಿವ್ವಳ ಲಾಭ ಬರುತ್ತಿದ್ದು, ಕಾರ್ಮಿಕರಿಗೆ ಪಿಎಲ್ಬಿ (PLB) ಹಾಗೂ ಗ್ರಾಚ್ಯುಟಿ ಸೌಲಭ್ಯ ನೀಡಬೇಕು. ವೈದ್ಯಕೀಯ ಅನರ್ಹತೆ ಯೋಜನೆ ಜಾರಿ ಸೇರಿದಂತೆ ಕಾರ್ಮಿಕರ ಇತರ ಪ್ರಮುಖ ಬೇಡಿಕೆಗಳ ಕುರಿತು ಕೂಡ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೇವಲ ಭರವಸೆಗಳನ್ನು ನೀಡುವುದರಿಂದ ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಸೆ.29ರಂದು ಗಣಿ ಬಂದ್ ನಡೆಸಿದರೆ ಕಾರ್ಮಿಕರ ಹಿತದೃಷ್ಟಿಯಿಂದ ಎಐಟಿಯುಸಿ ಬೆಂಬಲ ನೀಡಲು ಸಿದ್ಧವಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಾಗರೆಡ್ಡಿ ಜೇರಬಂಡಿ, ತಿಪ್ಪಣ್ಣ, ಮೌನುದ್ದೀನ್ ಬೂದಿನಾಳ, ಗಂಗಾಧರ, ಹನುಮಂತ, ಅಮರೇಶ್ ಗುಂತುಗೋಳ, ಪೆಂಚಲಮ್ಮ, ಶ್ರೀಕಾಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.



