ಬೆಂಗಳೂರು: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಶ್ರೀ ಸಿರಿನಾಡು ಮಹಾಸಭಾ, ಬೆಂಗಳೂರು ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಲೇಖನ ಸ್ಪರ್ಧೆಯಲ್ಲಿ ಕವಯತ್ರಿ, ಅಂಕಣಗಾರ್ತಿ ಹಾಗೂ ಲೇಖಕಿ ಪುಷ್ಪಲತಾ ಕೆ.ಎಸ್. ಹೆಗಡೆ ಪ್ರಥಮ ಬಹುಮಾನಕ್ಕೆ ಭಾಜನರಾಗಿದ್ದಾರೆ.

ಬೆಂಗಳೂರಿನ ಬಸವನಗುಡಿಯ ಶ್ರೀ ನಿಜಗುಣ ಕ್ಷೇತ್ರದಲ್ಲಿ ಸೆ.26ರಂದು ಆಯೋಜಿಸಿದ್ದ ಸಂಘಟನಾ ಸಮಾವೇಶದಲ್ಲಿ ಲೇಖನ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಸುಮಾರು 178 ಲೇಖಕಿಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, 18ರಿಂದ 85 ವರ್ಷ ವಯೋಮಾನದವರು ಪಾಲ್ಗೊಂಡಿರುವುದು ವಿಶೇಷವಾಗಿತ್ತು.

ಸ್ಪರ್ಧೆಯಲ್ಲಿ ಪುಷ್ಪಲತಾ ಕೆ.ಎಸ್. ಹೆಗಡೆ ಪ್ರಥಮ ಸ್ಥಾನ ಪಡೆದು ನೆನಪಿನ ಕಾಣಿಕೆ ಹಾಗೂ ನಗದು ಬಹುಮಾನ ಸ್ವೀಕರಿಸಿದರು. ರತ್ನ ಪಟವರ್ಧನ್ ದ್ವಿತೀಯ ಹಾಗೂ ಪೂಜಾ ತೃತೀಯ ಸ್ಥಾನ ಪಡೆದರು. ಚಿನ್ಮಯಿ, ಇಂದಿರಾ ಕೃಷ್ಣಮೂರ್ತಿ ಸೇರಿದಂತೆ ಒಟ್ಟು ಏಳು ಮಂದಿಗೆ ಸಮಾಧಾನಕರ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ನ್ಯಾಯವಾದಿ ಎಸ್.ಎಸ್. ನಾಗಾನಂದ ವಹಿಸಿದ್ದರು. ನ್ಯಾಯವಾದಿ ಪ್ರೀತಿ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಐಐಎಂ ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕಿ ಡಾ. ನಯನತಾರ, ವಿಶ್ರಾಂತ ನ್ಯಾಯಮೂರ್ತಿ ಜಸ್ಟಿಸ್ ಎನ್. ಕುಮಾರ್ ಹಾಗೂ ನ್ಯಾಯವಾದಿ ಎಸ್.ವಿ. ಶ್ರೀನಿವಾಸ್ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು.

ಸಿರಿ ನಾಡು ಮಹಾಸಭಾದ ಗೌರವಾಧ್ಯಕ್ಷ ಹೆಚ್.ಎನ್. ಸುಬ್ರಹ್ಮಣ್ಯ, ಅಧ್ಯಕ್ಷ ಸುದರ್ಶನಮ್ ಎಸ್., ಗೌರವ ಕಾರ್ಯದರ್ಶಿ ಟಿ.ಎಸ್. ಸುರೇಶ್, ಖಜಾಂಚಿ ಎನ್.ಎ. ನರಸಿಂಹಮೂರ್ತಿ, ಮಹಿಳಾ ವಿಭಾಗದ ರಾಜ್ಯ ಮುಖ್ಯ ಸಂಚಾಲಕಿ ಶ್ರೀದೇವಿ ಅನಂತರಾಮ್ ಸೇರಿದಂತೆ ವಿವಿಧ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಹುಮಾನ ಸ್ವೀಕರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪುಷ್ಪಲತಾ ಹೆಗಡೆ, ತಮ್ಮ ಬರಹಗಳನ್ನು ಓದಿ ಪ್ರೋತ್ಸಾಹಿಸಿದ ಓದುಗರಿಗೆ ಕೃತಜ್ಞತೆ ಸಲ್ಲಿಸಿದರು. ತಮ್ಮ ಲೇಖನಗಳಿಗೆ ಮೊದಲಿಗೆ ವೇದಿಕೆ ಕಲ್ಪಿಸಿದ ‘ಜನಮಿಡಿತ’ ದಿನಪತ್ರಿಕೆಯ ಸಂಪಾದಕ ಜಿ.ಎಂ. ಆರಾಧ್ಯ, ಪತ್ರಿಕಾ ಬಳಗದ ಪ್ರವೀಣ್ ಕುಮಾರ್ ಬೆಂಗಳೂರು ಹಾಗೂ ವಿವಿಧ ಜಿಲ್ಲಾ ದಿನಪತ್ರಿಕೆಗಳ ಸಂಪಾದಕರಾದ ನೀಲಕಂಠ ದಾತಾರ್, ‘ತುಂಗ ಬಿಂಬ’ದ ಗುರು ಸರ್, ಅಣ್ಣಪ್ಪ ಸರ್, ರಂಗನಾಥ ಸರ್ ಸೇರಿದಂತೆ ಪತ್ರಿಕಾ ಕ್ಷೇತ್ರದ ಹಲವರ ಪ್ರೋತ್ಸಾಹ ತಮ್ಮ ಈ ಸಾಧನೆಗೆ ಕಾರಣವಾಗಿದೆ ಎಂದು ಸಂತಸ ಹಂಚಿಕೊಂಡರು.