ಮಾನ್ವಿ: ಪಟ್ಟಣದ ಪ್ರವಾಸಿ ಮಂದಿರಕ್ಕೆ ಹೊಂದಿಕೊಂಡಿರುವ ಖಾಲಿ ನಿವೇಶನದಲ್ಲಿ ಸುಸಜ್ಜಿತ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ರಾಯಚೂರು–ಸಿಂಧನೂರು ರಸ್ತೆಯಲ್ಲಿರುವ ಪ್ರವಾಸಿ ಮಂದಿರದ ಸಮೀಪ ನೂತನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ನಿರ್ಮಾಣಕ್ಕೆ ಉದ್ದೇಶಿಸಿರುವ ಸ್ಥಳವನ್ನು ಪರಿಶೀಲಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ವೃತ್ತ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೆಆರ್ಡಿಸಿಎಲ್ ಅಧಿಕಾರಿಗಳು, ಚತುಷ್ಪಥ ರಸ್ತೆ ನಿರ್ಮಾಣ ಸಂಸ್ಥೆ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಶಾಸಕ ಹಂಪಯ್ಯ ನಾಯಕ, ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಕೆ. ಅಮರೇಶಪ್ಪ, ಚತುಷ್ಪಥ ರಸ್ತೆ ನಿರ್ಮಾಣ ಸಂಸ್ಥೆಯ ಅಧಿಕಾರಿ ವಿಶಾಲ್, ಪಿಐ ಸೋಮಶೇಖರ ಎಸ್., ಕೆಂಚರೆಡ್ಡಿ, ಕಂದಾಯ ನಿರೀಕ್ಷಕ ಚರಣಸಿಂಗ್ ಉಪಸ್ಥಿತರಿದ್ದರು.
ದಲಿತಪರ ಸಂಘಟನೆಗಳ ಮುಖಂಡರಾದ ಪ್ರಭುರಾಜ್ ಕೊಡ್ಲಿ, ಕೆ. ನಾಗಲಿಂಗಸ್ವಾಮಿ, ತಿಪ್ಪಣ್ಣ ಬಾಗಲವಾಡ, ಶಿವರಾಜ ಜಾನೇಕಲ್, ಶಿವರಾಜ ಉಮಳಿಹೊಸೂರು, ಜಯಪ್ರಕಾಶ್, ವಕೀಲ ದತ್ತಾತ್ರೇಯ ಸೇರಿದಂತೆ ಇನ್ನಿತರರು ಇದ್ದರು.



