ದೇವದುರ್ಗ : ಶಿಕ್ಷಣ, ಕ್ರೀಡೆ, ಸ್ಕೌಟ್ಸ್ ಮತ್ತು ಗೈಡ್ಸ್, ಸಾಮಾಜಿಕ ಸೇವೆ ಹಾಗೂ ಕನ್ನಡ ನಾಡು-ನುಡಿಯ ಸೇವೆಯಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶ್ರೀ ಬಸವೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ದೇವದುರ್ಗದ ದೈಹಿಕ ಶಿಕ್ಷಣ ಶಿಕ್ಷಕರಾದ ದಾವಲಸಾಬ್ ಬಂಡಿ ಅವರು 2026ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಬೆಂಗಳೂರು ವತಿಯಿಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ದಾವಲಸಾಬ್ ಬಂಡಿ ಅವರು 01-08-1969ರಂದು ದೇವದುರ್ಗ ತಾಲೂಕಿನ ಗೌರಂಪೇಟೆಯಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಗೌರಂಪೇಟೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ದೇವದುರ್ಗದ ಸರ್ಕಾರಿ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ನಂತರ ಲಿಂಗಸೂಗೂರಿನಲ್ಲಿ ಸಿ. ಪಿ. ಇಡಿ. ವೃತ್ತಿಪರ ಶಿಕ್ಷಣವನ್ನು ಪಡೆದರು.

ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ ಸೇವೆ

1993ರಿಂದ 2010ರವರೆಗೆ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಅವರು, 2011ರಿಂದ 2026ರವರೆಗೆ ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಾಲಾ ಮಕ್ಕಳ ಕ್ರೀಡಾಕೂಟಗಳಲ್ಲಿ ಹೋಬಳಿ ಮಟ್ಟದಿಂದ ರಾಜ್ಯ ಮಟ್ಟದವರೆಗೆ ವಿದ್ಯಾರ್ಥಿಗಳನ್ನು ಮುನ್ನಡೆಸಿ, ಕ್ರೀಡಾ ಕ್ಷೇತ್ರದಲ್ಲಿ ಹಲವು ಸಾಧನೆಗಳಿಗೆ ಕಾರಣರಾಗಿದ್ದಾರೆ.

ಸ್ವತಃ ಕ್ರೀಡಾಪಟುವಾಗಿಯೂ ಗುರುತಿಸಿಕೊಂಡಿರುವ ಅವರು, ದೈಹಿಕ ಶಿಕ್ಷಕರ ಕ್ರೀಡಾಕೂಟದಲ್ಲಿ ಹಾಗೂ ಸರ್ಕಾರ ನೌಕರರ ಸಂಘದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ಸತತ ಮೂರು ವರ್ಷ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಸ್ಪರ್ಧಿಸಿದ್ದಾರೆ. ಅಲ್ಲದೆ ತಾಲೂಕು, ಜಿಲ್ಲಾ ಹಾಗೂ ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾವಳಿಗಳಲ್ಲಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಸ್ಕೌಟ್ಸ್ ಮತ್ತು ಗೈಡ್ಸ್ ಕ್ಷೇತ್ರದಲ್ಲಿ ವಿಶೇಷ ಸೇವೆ

ದೇವದುರ್ಗ ತಾಲೂಕಿನಲ್ಲಿ ಪ್ರಪ್ರಥಮವಾಗಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕು ಸಂಸ್ಥೆಯನ್ನು ನೋಂದಣಿ ಮಾಡಿ ಪರಿಚಯಿಸಿದ ಕೀರ್ತಿ ದಾವಲಸಾಬ್ ಬಂಡಿ ಅವರಿಗೆ ಸಲ್ಲುತ್ತದೆ. ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಗೆ ಎರಡು ಬಾರಿ ಕರ್ನಾಟಕ ದರ್ಶನ ಕಾರ್ಯಕ್ರಮವನ್ನು ಆಯೋಜಿಸಿ, ಮಕ್ಕಳಲ್ಲಿ ಶಿಸ್ತು, ನಾಯಕತ್ವ, ದೇಶಪ್ರೇಮ ಹಾಗೂ ಸಾಮಾಜಿಕ ಜವಾಬ್ದಾರಿಯ ಮನೋಭಾವ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ, ರಾಯಚೂರು ವತಿಯಿಂದ ಮಾನ್ವಿಯಲ್ಲಿ ನಡೆದ 36ನೇ ರಾಜ್ಯ ಮಟ್ಟದ ಕಬ್ ಮತ್ತು ಬುಲ್‌ಬುಲ್ ಉತ್ಸವ-2013ರಲ್ಲಿಯೂ ಕ್ರಿಯಾಶೀಲವಾಗಿ ಭಾಗವಹಿಸಿದ್ದಾರೆ.

ಸಾಮಾಜಿಕ ಸೇವೆಯಲ್ಲಿ ಮುಂಚೂಣಿ

ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಿರುವ ಅವರು, ದೇವದುರ್ಗದ ರಸ್ತೆ ಡಿವೈಡರ್‌ಗಳು ಹಾಗೂ ತಾಲೂಕು ಕ್ರೀಡಾಂಗಣದಲ್ಲಿ ಗಿಡಮರಗಳನ್ನು ಬೆಳೆಸುವ ಕಾರ್ಯದಲ್ಲಿಯೂ ಸಹಕರಿಸಿದ್ದಾರೆ. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ತಾಲೂಕಿನ ಹಿರಿಯ ನಾಗರಿಕರಿಗಾಗಿ ಮ್ಯಾರಥಾನ್ ಓಟ ಹಾಗೂ ಸೈಕಲ್ ಜಾಥಾ ಆಯೋಜಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ.

ಕನ್ನಡ ನಾಡು-ನುಡಿಯ ಸೇವೆ

ರಾಯಚೂರಿನಲ್ಲಿ ನಡೆದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಧ್ವಜಾರೋಹಣ ಸಮಿತಿ ಹಾಗೂ ಕನ್ನಡ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಜಾನಪದ ಸಾಹಿತ್ಯ ಪರಿಷತ್, ಚುಟುಕು ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಧ್ವಜಾರೋಹಣ ಸಮಿತಿಗಳಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ.

ಆರೋಗ್ಯ ಮತ್ತು ಪ್ರಥಮ ಚಿಕಿತ್ಸಾ ಕ್ಷೇತ್ರದಲ್ಲೂ ಸೇವೆ

ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಬೆಂಗಳೂರು ವತಿಯಿಂದ ದೇವದುರ್ಗದ ಶಿಕ್ಷಕರ ಕಲಿಕಾ ಕೇಂದ್ರದಲ್ಲಿ ಆಯೋಜಿಸಲಾದ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮದಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಿದ್ದಾರೆ.

ಜಿಲ್ಲಾ ಆಯುಷ್ ಇಲಾಖೆ, ರಾಯಚೂರು ವತಿಯಿಂದ 2015ರಲ್ಲಿ ಆಯೋಜಿಸಲಾದ ವಸತಿ ಸಹಿತ ಯೋಗ ಮತ್ತು ಆರೋಗ್ಯ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಹಲವಾರು ಪ್ರಶಸ್ತಿಗಳ ಗೌರವ

ದಾವಲಸಾಬ್ ಬಂಡಿ ಅವರ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿ ವಿವಿಧ ಹಂತಗಳಲ್ಲಿ ಹಲವಾರು ಪ್ರಶಸ್ತಿಗಳು ಲಭಿಸಿವೆ.

* 2003 – ಶ್ರೀ ಬಸವೇಶ್ವರ ವಿದ್ಯಾ ಸಂಸ್ಥೆಯಿಂದ ಉತ್ತಮ ಶಿಕ್ಷಕ ಪ್ರಶಸ್ತಿ * 2008 – ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ದೇವದುರ್ಗ ತಾಲೂಕು ಘಟಕದಿಂದ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ * 2012 – ಕರ್ನಾಟಕ ಸರ್ಕಾರದಿಂದ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ * 2012 – ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ರಾಯಚೂರು ಜಿಲ್ಲಾ ಘಟಕದಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ * 2021 – ಕರ್ನಾಟಕ ಸರ್ಕಾರದ ವತಿಯಿಂದ ಜಿಲ್ಲಾ ಮಟ್ಟದ ಉತ್ತಮ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಸ್ತಿ * 2026 – ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಬೆಂಗಳೂರು ವತಿಯಿಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ಶಿಕ್ಷಣದ ಜೊತೆಗೆ ಕ್ರೀಡೆ, ಸ್ಕೌಟ್ಸ್ ಮತ್ತು ಗೈಡ್ಸ್, ಆರೋಗ್ಯ, ಪರಿಸರ, ಸಾಮಾಜಿಕ ಸೇವೆ ಹಾಗೂ ಕನ್ನಡ ನಾಡು-ನುಡಿಯ ಕ್ಷೇತ್ರಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ದಾವಲಸಾಬ್ ಬಂಡಿ ಅವರ ಸಾಧನೆಗಳು ಶಿಕ್ಷಕ ವೃತ್ತಿಗೆ ಮಾದರಿಯಾಗಿವೆ ಎಂದು ಶಿಕ್ಷಣಾಭಿಮಾನಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.