ಮಾನ್ವಿ: ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ದೇಶಪ್ರೇಮ, ಶಿಸ್ತು ಹಾಗೂ ಸಮಾಜಮುಖಿ ಮನೋಭಾವ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಧ್ವಜ ಚೀಟಿ ಬಿಡುಗಡೆ ಕಾರ್ಯಕ್ರಮವನ್ನು ಮಾನ್ವಿ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು. ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಶಾಲಾ-ಕಾಲೇಜುಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳನ್ನು ನಡೆಸಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಮೂಲಕ ಉತ್ತಮ ಮೌಲ್ಯಗಳು ಮತ್ತು ನಾಗರಿಕ ಜವಾಬ್ದಾರಿಯನ್ನು ಬೆಳೆಸುವ ಕಾರ್ಯವನ್ನು ಸಂಸ್ಥೆ ನಿರಂತರವಾಗಿ ಕೈಗೊಂಡಿದೆ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು. ಮಾನ್ವಿ ಸ್ಥಳೀಯ ಸಂಸ್ಥೆಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜ ಚೀಟಿಯನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಲಾ ಕಾರ್ಯದರ್ಶಿ ಹಾಗೂ ಸ್ಥಳೀಯ ಸಂಸ್ಥೆಯ ಪದಾಧಿಕಾರಿ ಸಯ್ಯದ್ ಮುಜತಬಾ ಖಾದ್ರಿ, ಮುಖ್ಯಗುರು ನಾಗರತ್ನ ದೇಸಾಯಿ, ಸ್ಥಳೀಯ ಸಂಸ್ಥೆಯ ಜಂಟಿ ಕಾರ್ಯದರ್ಶಿ ನರಸಿಂಹಮೂರ್ತಿ ದೇಸಾಯಿ, ದಳ ನಾಯಕಿ ಸೌಮ್ಯ, ಶಿಕ್ಷಕರಾದ ಶಿಂಧೆ, ಅಂಬಣ್ಣ, ಮೋಹನ್ ಸಿಂಗ್ ಸೇರಿದಂತೆ ಇತರ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.



