ದೇವದುರ್ಗ, ಸೆ.27: ಪ್ರತಿಯೊಬ್ಬರೂ ಮೊದಲು ಉತ್ತಮ ಮನುಷ್ಯರಾಗಬೇಕು. ಬಳಿಕ ಮಾನವೀಯ ಹಾಗೂ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದು ಶಾಸಕಿ ಕರೆಮ್ಮ ಜಿ. ನಾಯಕ ಕರೆ ನೀಡಿದರು.
ಪಟ್ಟಣದ ಬಾಬು ಜಗಜೀವನರಾಮ್ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ದೇವದುರ್ಗ ವತಿಯಿಂದ ಆಯೋಜಿಸಿದ್ದ 2120ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಾಮಾನ್ಯ ಮಹಿಳೆಯರಲ್ಲಿ ಉತ್ತಮ ಬಾಂಧವ್ಯ ಬೆಳೆಸುವುದರ ಜೊತೆಗೆ ಹಣ ಉಳಿತಾಯ, ಆರ್ಥಿಕ ಶಿಸ್ತು ಹಾಗೂ ಸ್ವಾವಲಂಬಿ ಬದುಕಿನ ಕುರಿತು ಮಾರ್ಗದರ್ಶನ ನೀಡುವ ಮೂಲಕ ಮಹತ್ವದ ಸೇವೆ ಸಲ್ಲಿಸುತ್ತಿದೆ. ಮಹಿಳೆಯರನ್ನು ಸಂಘಟಿಸಿ ಅವರ ಬದುಕಿನಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯ ಶ್ಲಾಘನೀಯ ಎಂದರು.
ಮದ್ಯವರ್ಜನ ಶಿಬಿರದ ಮೂಲಕ ವ್ಯಸನಮುಕ್ತ ಬದುಕಿನತ್ತ ಹೆಜ್ಜೆ ಇಟ್ಟ ಶಿಬಿರಾರ್ಥಿಗಳನ್ನು ಅಭಿನಂದಿಸಿದ ಅವರು, ವ್ಯಸನಗಳಿಂದ ಮುಕ್ತಗೊಳಿಸಲು ಶ್ರಮಿಸುತ್ತಿರುವ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು. ಪ್ರತಿಯೊಬ್ಬರೂ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆಯದೆ, ನೆಮ್ಮದಿಯ ಜೀವನ ನಡೆಸುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ಮದ್ಯಪಾನ, ಧೂಮಪಾನ, ಮಟ್ಕಾ, ಇಸ್ಪೀಟು ಹಾಗೂ ಜೂಜಾಟದಂತಹ ದುಶ್ಚಟಗಳಿಗೆ ಯಾರೂ ಬಲಿಯಾಗಬಾರದು. ಇಂತಹ ಅನೈತಿಕ ಚಟುವಟಿಕೆಗಳನ್ನು ತಡೆಯುವ ಪ್ರಯತ್ನಗಳಿಗೆ ತಮ್ಮ ಸಂಪೂರ್ಣ ಬೆಂಬಲವಿದೆ. ಮಟ್ಕಾ, ಮದ್ಯ ಸೇರಿದಂತೆ ಯಾವುದೇ ಅನೈತಿಕ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಹಾಗೂ ಅವುಗಳಿಗೆ ಬೆಂಬಲ ನೀಡುವುದಿಲ್ಲ ಎಂದು ತಿಳಿಸಿದರು.
ಸಮಾಜದಲ್ಲಿ ವ್ಯಸನಗಳ ವಿರುದ್ಧ ನಿರಂತರವಾಗಿ ಜಾಗೃತಿ ಮೂಡಿಸುವ ಅಗತ್ಯವಿದೆ. ದುಶ್ಚಟಗಳಿಂದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದು, ಅದರ ಪರಿಣಾಮ ಮಕ್ಕಳ ಮೇಲೆಯೂ ಬೀಳುತ್ತಿದೆ. ಆದ್ದರಿಂದ ಪಾಲಕರು ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ, ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಬಸನಗೌಡ ದೇಸಾಯಿ ವಕೀಲರು, ರಾಘವೇಂದ್ರ ಪಟಗಾರ ಸೇರಿದಂತೆ ಅನೇಕರು ಮಾತನಾಡಿದರು.
ಹನುಮಂತ್ರಾಯ ಚಿಂತಲಕುಂಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭಾನುಪ್ರಕಾಶ ಖೇಣದ್, ಸುಭಾಶ್ಚಂದ್ರ ಪಾಟೀಲ್, ಸತೀಶ್ ಬಳೆ, ನರಸಿಂಗರಾವ್ ಸರ್ಕಿಲ್, ತೋಟಮ್ಮ, ಶಶಿಕಲಾ ಭೋವಿ, ಶರಣಪ್ಪ, ವೆಂಕಟೇಶ ನಾಯಕ ಸೋಮಕಾರ, ನವ್ಯ ಪಾಟೀಲ್, ಮೌನೇಶ ಪತ್ತಾರ, ಪಂಪಣ್ಣ ಅಕ್ಕರಿಕಿ, ಜೆ. ಚಂದ್ರಶೇಖರ, ಅನೀಲ್ ಕುಮಾರ, ಸುಭಾಶ್ ಚೌಟೇರ್, ಮಂಜಯ್ಯ ಮಠದ, ರವೀಂದ್ರ ಸೇರಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರು, ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.



