ರಾಯಚೂರು: ರೋಟರಿ ಕ್ಲಬ್ ರಾಯಚೂರು ಈಸ್ಟ್ ವತಿಯಿಂದ ನೀಡಲಾಗುವ ಜಿಲ್ಲಾ ಮಟ್ಟದ ಪ್ರತಿಷ್ಠಿತ ‘ನೇಷನ್ ಬಿಲ್ಡರ್ ಅವಾರ್ಡ್’ಗೆ ಮಾನ್ವಿ ತಾಲೂಕಿನ ಮುಷ್ಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಝರೀನಾ ಭಾಜನರಾಗಿದ್ದಾರೆ.
ನಗರದ ಕೃಷಿ ವಿಶ್ವವಿದ್ಯಾಲಯದ ಸಿಲ್ವರ್ ಜುಬಿಲಿ ಹಾಲ್ನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಝರೀನಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯೊಂದಿಗೆ ಅವರ ಸರ್ವತೋಮುಖ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಝರೀನಾ ಅವರು, ಬೋಧನೆಯಲ್ಲಿ ಸೃಜನಶೀಲ ವಿಧಾನಗಳನ್ನು ಅಳವಡಿಸಿಕೊಂಡು ಗಮನ ಸೆಳೆದಿದ್ದಾರೆ. ಅಲ್ಲದೆ, ರಾಜ್ಯಮಟ್ಟದ ಪಾಠೋಪಕರಣಗಳ ತಯಾರಿಕೆ ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ತೋರಿದ್ದಾರೆ. ಅವರ ಶೈಕ್ಷಣಿಕ ಸೇವೆ, ಸೃಜನಶೀಲ ಬೋಧನಾ ಚಟುವಟಿಕೆ ಹಾಗೂ ವಿದ್ಯಾರ್ಥಿಗಳ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆಯನ್ನು ಗುರುತಿಸಿ ‘ನೇಷನ್ ಬಿಲ್ಡರ್ ಅವಾರ್ಡ್’ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಝರೀನಾ ಅವರನ್ನು ಗಣ್ಯರು ಅಭಿನಂದಿಸಿ, ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವುದರೊಂದಿಗೆ ಉತ್ತಮ ಸಮಾಜ ನಿರ್ಮಾಣದಲ್ಲಿಯೂ ಮಹತ್ವದ ಪಾತ್ರ ವಹಿಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ. ಚನ್ನಬಸವಯ್ಯ ಹಿರೇಮಠ, ರೋಟರಿ ಕ್ಲಬ್ನ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳಾದ ಕೆ. ಚಂದ್ರಕಾಂತ, ಕೆ. ಲಕ್ಷ್ಮಿಕಾಂತ್ ರೆಡ್ಡಿ, ಎಂ. ರಂಗಲಿಂಗನಗೌಡ, ಎಸ್. ಚೇತನ್ ಕುಮಾರ್, ಡಾ. ಕೆ. ಪ್ರಮೋದ್ ಕುಮಾರ, ಪಿ. ಚಂದ್ರಶೇಖರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



