ದೇವದುರ್ಗ, ಸೆ.27: ರೈತರಿಗೆ ಅನುಕೂಲವಾಗಿರುವ ಚಿಕ್ಕಹೊನ್ನಕುಣಿ ನೀರಾವರಿ ಇಲಾಖೆಯ ಕಚೇರಿಯನ್ನು ಸ್ಥಳಾಂತರಿಸಲು ಮುಂದಾಗಿರುವ ಕ್ರಮವನ್ನು ವಿರೋಧಿಸಿ ಶಾಸಕಿ ಕರಿಯಮ್ಮ ಜಿ. ನಾಯಕ್ ಅವರ ನೇತೃತ್ವದಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹಾಗೂ ಸಾರ್ವಜನಿಕರು ಭಾಗವಹಿಸಬೇಕು ಎಂದು ಜೆಡಿಎಸ್ ದೇವದುರ್ಗ ನಗರ ಘಟಕದ ಅಧ್ಯಕ್ಷ ಭೀಮಣ್ಣ ಗೋಸಲ್ ಕರೆ ನೀಡಿದರು.
ಚಿಕ್ಕಹೊನ್ನಕುಣಿ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ರೈತರಿಗೆ ಸ್ಥಳೀಯ ಕಚೇರಿ ಬಹಳ ಅನುಕೂಲಕರವಾಗಿದೆ. ಕಚೇರಿಯನ್ನು ಬೇರೆಡೆಗೆ ಸ್ಥಳಾಂತರಿಸಿದರೆ, ರೈತರು ತಮ್ಮ ಸಮಸ್ಯೆಗಳು ಹಾಗೂ ಇಲಾಖೆಯ ಕೆಲಸಗಳಿಗೆ ದೂರದ ಸ್ಥಳಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಲಿದೆ ಎಂದು ಅವರು ಹೇಳಿದರು.
ಆದ್ದರಿಂದ ಕಚೇರಿ ಸ್ಥಳಾಂತರದ ನಿರ್ಧಾರವನ್ನು ಕೈಬಿಟ್ಟು, ಈಗಿರುವ ಸ್ಥಳದಲ್ಲಿಯೇ ಕಚೇರಿಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಈ ಹಿನ್ನೆಲೆಯಲ್ಲಿ ಶಾಸಕಿ ಕರಿಯಮ್ಮ ಜಿ. ನಾಯಕ್ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ದೇವದುರ್ಗ ತಾಲೂಕಿನ ರೈತರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಭೀಮಣ್ಣ ಗೋಸಲ್ ಮನವಿ ಮಾಡಿದರು.
ರೈತರ ಹಿತಾಸಕ್ತಿಗಾಗಿ ನಡೆಯುತ್ತಿರುವ ಈ ಹೋರಾಟವನ್ನು ಯಶಸ್ವಿಗೊಳಿಸಲು ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಬೇಕು ಎಂದು ಅವರು ತಿಳಿಸಿದ್ದಾರೆ.



