ಮಾನ್ವಿ: ಲಿಂ. ಶ್ರೀ ಹಾನಗಲ್ ಕುಮಾರ ಶಿವಯೋಗಿಗಳ 159ನೇ ಜಯಂತಿ ಅಂಗವಾಗಿ ಮಾನ್ವಿ ನಗರಕ್ಕೆ ಆಗಮಿಸಿದ ಜ್ಯೋತಿ ರಥಯಾತ್ರೆ ಹಾಗೂ ಪಾದಯಾತ್ರೆಯನ್ನು ಪಟ್ಟಣದಲ್ಲಿ ಭಕ್ತಿಭಾವದಿಂದ ಬರಮಾಡಿಕೊಳ್ಳಲಾಯಿತು.
ಪಟ್ಟಣದ ಒಳಬಳ್ಳಾರಿಯ ಶ್ರೀ ಸುವರ್ಣಗಿರಿ ವಿರಕ್ತಮಠದ ಶ್ರೀ ಚನ್ನಬಸವ ಶಿವಯೋಗಿಗಳ ಪ್ರಸಾದ ನಿಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಅವರು ರಥಯಾತ್ರೆಯನ್ನು ಸ್ವಾಗತಿಸಿ, ಲಿಂ. ಶ್ರೀ ಹಾನಗಲ್ ಕುಮಾರ ಶಿವಯೋಗಿಗಳ ಪುತ್ತಳಿಗೆ ಪೂಜೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅವರು, ಶಿಕ್ಷಣ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ಹಾನಗಲ್ ಕುಮಾರ ಶಿವಯೋಗಿಗಳು ನೀಡಿರುವ ಕೊಡುಗೆ ಅಪಾರವಾಗಿದೆ. ಸಮಾಜದಲ್ಲಿ ಜಾಗೃತಿ, ಸಂಸ್ಕಾರ ಹಾಗೂ ಧಾರ್ಮಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಅವರ ಸೇವೆ ಸದಾ ಸ್ಮರಣೀಯವಾಗಿದೆ ಎಂದು ಹೇಳಿದರು.
ಜ್ಯೋತಿ ರಥಯಾತ್ರೆ ಮತ್ತು ಪಾದಯಾತ್ರೆಯ ಅಧ್ಯಕ್ಷ ನರಡಗಂಬದ ಪಂಚಮ ಸಿದ್ದಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಹಾನಗಲ್ ಕುಮಾರ ಶಿವಯೋಗಿಗಳು ಸ್ಥಾಪಿಸಿದ ಶಿವಯೋಗ ಮಂದಿರದಲ್ಲಿ ನೂರಾರು ವಟುಗಳು ಶಿವಯೋಗ ದೀಕ್ಷೆ ಪಡೆದು, ಇಂದು ರಾಜ್ಯದ ವಿವಿಧ ಮಠಗಳಲ್ಲಿ ಧರ್ಮದ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಹೇಳಿದರು.
ಪ್ರತಿವರ್ಷ ರಾಜ್ಯದ ಒಂದೊಂದು ತಾಲೂಕಿನಲ್ಲಿ ಹಾನಗಲ್ ಕುಮಾರ ಶಿವಯೋಗಿಗಳ ಜಯಂತಿ ಆಚರಿಸಲಾಗುತ್ತಿದ್ದು, ಈ ವರ್ಷ ಸಿಂಧನೂರಿನ ಆರ್ಜಿಎಂ ಶಾಲಾ ಆವರಣದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 2ರಂದು ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಸುಮಾರು 10 ಸಾವಿರ ಮಹಿಳೆಯರಿಂದ ತ್ರಿವರ್ಣಧ್ವಜದೊಂದಿಗೆ ರೊಟ್ಟಿ ಬುತ್ತಿ ಕಾರ್ಯಕ್ರಮ ಹಾಗೂ ಅಕ್ಟೋಬರ್ 4ರಂದು 159ನೇ ಜಯಂತಿಯ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಜಯಂತಿ ಅಂಗವಾಗಿ ವಿವಿಧ ಪಟ್ಟಣ ಮತ್ತು ಗ್ರಾಮಗಳಲ್ಲಿ ಜ್ಯೋತಿ ರಥಯಾತ್ರೆ ನಡೆಸಿ ಭಕ್ತರನ್ನು ಆಹ್ವಾನಿಸಲಾಗುತ್ತಿದೆ. ಬೆಳಿಗ್ಗೆ ಸದ್ಭಾವನಾ ಯಾತ್ರೆ, ಮನೆ ಮನೆಗೆ ತೆರಳಿ ‘ದುಶ್ಚಟಗಳ ಭಿಕ್ಷೆ–ಸದ್ಗುಣಗಳ ದೀಕ್ಷೆ’ ಅಭಿಯಾನದ ಮೂಲಕ ಶ್ರೀ ಕುಮಾರೇಶನ ಜೋಳಿಗೆಯಲ್ಲಿ ದುಶ್ಚಟಗಳನ್ನು ತ್ಯಜಿಸುವಂತೆ ಪ್ರೇರೇಪಿಸಿ, ಸದ್ಗುಣಗಳನ್ನು ಅಳವಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ಜನರಿಗೆ ಸರಳ ಶಿವಯೋಗ ಮತ್ತು ಇಷ್ಟಲಿಂಗ ಪೂಜೆಯ ವಿಧಾನವನ್ನು ತಿಳಿಸಿಕೊಡುವುದರ ಜೊತೆಗೆ, ಕಾಲೇಜುಗಳಿಗೆ ಭೇಟಿ ನೀಡಿ ಯುವ ಸಮುದಾಯಕ್ಕೆ ದತ್ತಿ ಉಪನ್ಯಾಸಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಶ್ರೀಗಳು ತಿಳಿಸಿದರು.
ಪಟ್ಟಣದ ಬಸವ ಕಾಂಪ್ಲೆಕ್ಸ್ನಿಂದ ಪ್ರಮುಖ ಬೀದಿಗಳ ಮೂಲಕ ಈಶ್ವರ ದೇವಸ್ಥಾನ ಹಾಗೂ ಶ್ರೀ ಚನ್ನಬಸವ ಶಿವಯೋಗಿಗಳ ಪ್ರಸಾದ ನಿಲಯದ ಆವರಣದವರೆಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥಯಾತ್ರೆ ಸಾಗಿತು.
ಕಾರ್ಯಕ್ರಮದಲ್ಲಿ ಶ್ರೀ ಸುವರ್ಣಗಿರಿ ವಿರಕ್ತಮಠದ ಕಿರಿಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಯದ್ದಲದೊಡ್ಡಿ ಮಠದ ಶ್ರೀ ಮಹಾಲಿಂಗ ಮಹಾಸ್ವಾಮಿಗಳು, ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಕರೆಗುಡ್ಡ ಶ್ರೀ ಮಹಾಂತೇಶ್ವರ ಮಠದ ಶ್ರೀ ಮಹಾಂತಲಿಂಗ ಮಹಾಸ್ವಾಮಿಗಳು, ಚೀಕಲಪರ್ವಿಯ ಶ್ರೀ ರುದ್ರಮುನೀಶ್ವರ ಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು, ಅಡವಿ ಅಮರೇಶ್ವರ ಮಠದ ಶ್ರೀ ತೋಟದಾರ್ಯ ಮಹಾಸ್ವಾಮಿಗಳು, ಅಕ್ಕಿಆಲೂರಿನ ಶ್ರೀ ಶಿವಬಸವ ಸ್ವಾಮಿಗಳು, ಕಲ್ಲೂರಿನ ಶ್ರೀ ಶಂಭುಲಿಂಗ ಮಹಾಸ್ವಾಮಿಗಳು, ಸಿರುಗುಪ್ಪದ ಗುರುಬಸವ ಮಹಾಮಠದ ಬಸವಭೂಷಣ ಮಹಾಸ್ವಾಮಿಗಳು, ತೆಲಂಗಾಣದ ವಿರೂಪಾಕ್ಷ ಸ್ವಾಮಿಗಳು ಸೇರಿದಂತೆ ವಿವಿಧ ಮಠಗಳ ಶ್ರೀಗಳು ಭಾಗವಹಿಸಿದ್ದರು.
ಶಾಸಕ ಹಂಪಯ್ಯ ನಾಯಕ, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ರಾಯಚೂರು ಶಾಸಕ ಡಾ. ಎಸ್. ಶಿವರಾಜ ಪಾಟೀಲ್, ಮಾಜಿ ಶಾಸಕರಾದ ಬಸವನಗೌಡ ಬ್ಯಾಗವಾಟ, ರಾಜಾ ವೆಂಕಟಪ್ಪ ನಾಯಕ, ದೊಡ್ಡಬಸಪ್ಪಗೌಡ, ತಾಲೂಕು ವೀರಶೈವ ಲಿಂಗಾಯತ ಸಮಾಜದ ಗೌರವಾಧ್ಯಕ್ಷ ಶ್ರೀಧರಸ್ವಾಮಿ, ತಾಲೂಕು ಅಧ್ಯಕ್ಷ ಹರಿಹರ ಪಾಟೀಲ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಅರುಣಚಂದಾ, ತಿಮ್ಮರೆಡ್ಡಿ ಭೋಗವತಿ, ಸಿದ್ದಲಿಂಗಪ್ಪ ವಕೀಲರು, ಶಿವಶಂಕ್ರಯ್ಯಸ್ವಾಮಿ, ಗುರುಸಿದ್ದಪ್ಪ ಕಣ್ಣೂರು, ವೀರನಗೌಡ, ವಿಜಯಕುಮಾರ, ವೆಂಕನಗೌಡ, ವಿಶ್ವನಾಥ ಪಾಟೀಲ್, ಜಗದೀಶ್ ಓತ್ತೂರ್, ಬಸವರಾಜಪ್ಪ ಚಿಮ್ಮಲಾಪುರ್, ಮಲ್ಲನಗೌಡ ನಕ್ಕುಂದಿ, ಬಸವರಾಜ ಚೀಕಲಪರ್ವಿ, ಸುರೇಶ ನಾಡಗೌಡ, ಹನುಮಂತರೆಡ್ಡಿ, ಶರಣಪ್ಪಗೌಡ ನಕ್ಕುಂದಿ, ಶಿವಲಿಂಗಯ್ಯಸ್ವಾಮಿ ಸೇರಿದಂತೆ ಸಮಾಜದ ಮುಖಂಡರು ಹಾಗೂ ಭಕ್ತರು ಪಾಲ್ಗೊಂಡಿದ್ದರು.



