ಮಾನ್ವಿ: ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ವತಿಯಿಂದ ಜಿಲ್ಲೆಯ ವಿವಿಧ ತಾಲೂಕು ಸಮಿತಿಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿದ ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಶಿವರಾಜ ಜಾನೇಕಲ್ ಮಾತನಾಡಿ, ಒಕ್ಕೂಟವು 65 ಸಮುದಾಯಗಳನ್ನು ಒಳಗೊಂಡಿದ್ದು, ಜಿಲ್ಲೆಯ ವಿವಿಧ ಬಲಗೈ ಸಮುದಾಯಗಳನ್ನು ಸಂಘಟಿಸಿ ಒಂದೇ ವೇದಿಕೆಗೆ ತರುವ ಮೂಲಕ ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸುವುದು ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಈ ಉದ್ದೇಶದಿಂದ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅವರು ಸಮುದಾಯದ ಅಭಿವೃದ್ಧಿ ಹಾಗೂ ಹಕ್ಕುಗಳಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೌರವಾಧ್ಯಕ್ಷ ಹೆಚ್. ಮಲ್ಲೇಶ್ ಮಾತನಾಡಿ, ಸಮುದಾಯದ ಇತಿಹಾಸ ಮತ್ತು ಅದರ ಹೋರಾಟದ ಹಿನ್ನೆಲೆಯನ್ನು ಅರಿತಾಗ ಮಾತ್ರ ಪರಿಣಾಮಕಾರಿ ನಾಯಕತ್ವ ರೂಪುಗೊಳ್ಳಲು ಸಾಧ್ಯ. 1980ರ ದಶಕದಲ್ಲಿ ಪ್ರಗತಿಪರ ಸಂಘಟನೆಗಳು ಜಾತಿ ವಿನಾಶಕ್ಕಾಗಿ ಹೋರಾಟ ನಡೆಸಿದ್ದರೆ, ಇಂದು ಸಮುದಾಯಗಳ ಹಕ್ಕು ಮತ್ತು ಅಭಿವೃದ್ಧಿಗಾಗಿ ಸಂಘಟಿತ ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.
ನೂತನ ಪದಾಧಿಕಾರಿಗಳು 65 ಸಮುದಾಯಗಳಿಗೆ ಅಗತ್ಯವಾದ ಭೂಮಿ ಹಾಗೂ ಮೂಲಭೂತ ಹಕ್ಕುಗಳನ್ನು ಪಡೆಯಲು ಹೋರಾಟ ನಡೆಸಬೇಕು. ಮುಂದಿನ ದಿನಗಳಲ್ಲಿ ಒಕ್ಕೂಟದ ವತಿಯಿಂದ ಆರ್ಥಿಕ ಮತ್ತು ಶೈಕ್ಷಣಿಕ ಕಾರ್ಯಾಗಾರಗಳನ್ನು ಆಯೋಜಿಸಿ ತರಬೇತಿ ನೀಡಲಾಗುವುದು. ಜೊತೆಗೆ ಸಮುದಾಯಗಳನ್ನು ಇನ್ನಷ್ಟು ಸಂಘಟಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾನ್ವಿ ತಾಲೂಕು ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಶ್ರವಣಕುಮಾರ ಅರೋಲಿ, ತಾಲೂಕು ಅಧ್ಯಕ್ಷರಾಗಿ ಶಿವಶಂಕರ ಹಿರೇಕೊಟ್ನೆಕಲ್, ಕಾರ್ಯಾಧ್ಯಕ್ಷರಾಗಿ ಮಲ್ಲಿಕಾರ್ಜುನ ವಕೀಲರು, ಉಪಾಧ್ಯಕ್ಷರಾಗಿ ಚನ್ನಬಸವ ಪೋತ್ನಾಳ್, ಕೃಷ್ಣಪ್ಪ ಬ್ಯಾಗವಾಟ, ಹನುಮಂತ ದಾಸರಿ ಕಪಗಲ್, ಪ್ರಧಾನ ಕಾರ್ಯದರ್ಶಿಯಾಗಿ ನರಸಿಂಹಲು ರಾಜೋಳ್ಳಿ, ಜಂಟಿ ಕಾರ್ಯದರ್ಶಿಯಾಗಿ ಪ್ರವೀಣ ಮಾನ್ವಿ, ಸಂಘಟನಾ ಕಾರ್ಯದರ್ಶಿಯಾಗಿ ಶಿವರಾಜ ಹೆಚ್., ಸಹ ಕಾರ್ಯದರ್ಶಿಯಾಗಿ ನಾಗು ನಕ್ಕುಂದಿ ಹಾಗೂ ಖಜಾಂಚಿಯಾಗಿ ಅಯ್ಯಪ್ಪ ಆಯ್ಕೆಯಾದರು.
ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚನ್ನಬಸವ, ಲಿಂಗಪ್ಪ, ಬುಡ್ಡಪ್ಪ, ರೇಣುಕಾರಾಜ್, ಶಶಿಕಾಂತ್ ಸೇರಿದಂತೆ ವಿವಿಧ ತಾಲೂಕುಗಳ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಿ ಆದೇಶಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ರಾಯಪ್ಪ ವಕೀಲರು, ಬಸವರಾಜ ಬೊಮ್ಮನಾಳ್, ಮಹಾಲಿಂಗಪ್ಪ ಮಲ್ಲಾಪುರ್, ಹನುಮೇಶ ಸಿರವಾರ, ಕೆ. ಯಲ್ಲಪ್ಪ ಬೊಮ್ಮನಾಳ್, ಚನ್ನಪ್ಪ ಮಿನಗಡ, ಬಸವರಾಜ ಬಾಗಲವಾಡ, ಅಂಬಣ್ಣ ಮಲ್ಲಾಪುರ್, ಅಕ್ಷಯ ಕುಮಾರ ಬಂಡಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



