ಮಾನ್ವಿ: ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಶ್ರೀ ಜಗಜ್ಯೋತಿ ಬಸವೇಶ್ವರ ವೃತ್ತದ ಸ್ಥಳವನ್ನು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಪರಿಶೀಲಿಸಿದರು.
ಪಟ್ಟಣದ ಬಸವ ವೃತ್ತಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಅವರು, ನಂತರ ತಾಲೂಕು ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆಯ ಮುಂಭಾಗದಲ್ಲಿರುವ ಸರ್ಕಾರಿ ಸ್ಥಳವನ್ನು ವೀಕ್ಷಿಸಿದರು. ಈ ಸ್ಥಳದಲ್ಲಿ ಭವ್ಯವಾದ ಶ್ರೀ ಜಗಜ್ಯೋತಿ ಬಸವೇಶ್ವರ ವೃತ್ತವನ್ನು ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೆಆರ್ಡಿಸಿಎಲ್ ಅಧಿಕಾರಿಗಳಿಗೆ ಸೂಚಿಸಿದರು.
ವೃತ್ತದ ನಿರ್ಮಾಣ ಕಾರ್ಯವನ್ನು ಯೋಜಿತವಾಗಿ ಕೈಗೊಂಡು ಪಟ್ಟಣದ ಪ್ರಮುಖ ಆಕರ್ಷಣೆಯಾಗಿ ರೂಪಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ನಿರ್ಮಾಣಕ್ಕೆ ಅಗತ್ಯವಿರುವ ಸಹಕಾರವನ್ನು ನೀಡುವಂತೆ ಲೋಕೋಪಯೋಗಿ ಇಲಾಖೆ, ತಾಲೂಕು ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಶಾಸಕ ಜಿ. ಹಂಪಯ್ಯ ನಾಯಕ, ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್, ಪಂಚ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಬಿ.ಕೆ. ಅಮರೇಶಪ್ಪ ವಕೀಲರು, ತಾಲೂಕು ಬಸವ ಸಮಿತಿಯ ಗೌರವಾಧ್ಯಕ್ಷ ಡಾ. ಬಸವಪ್ರಭು ಪಾಟೀಲ್, ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಹರಿಹರ ಪಾಟೀಲ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಅರುಣಚಾಂದ್, ಮುಖಂಡರಾದ ಎ. ಬಾಲಸ್ವಾಮಿ ಕೊಡ್ಲಿ, ಸೈಯದ್ ಖಾಲಿದ್ ಖಾದ್ರಿ, ಮಹೇಶ್ ಗೌಡ ಗವಿಗಟ್, ಮಹಾಂತೇಶ ಸ್ವಾಮಿ, ಶಿವರಾಜ್ ಪಾಟೀಲ್ ಸಂಗಾಪುರ, ಸತ್ತಾರ್ ಬಂಗ್ಲೆವಾಲೆ, ರಸೂಲ್ ಖುರೇಶಿ, ಎಸ್.ಎಂ. ಪಾಟೀಲ್, ಕಾಮೇಶ್, ಹಂಪಯ್ಯ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.



