ಹಟ್ಟಿ ಚಿನ್ನದ ಗಣಿ: ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ವೆಂಕಟೇಶ್ ತಂದೆ ಲಿಂಗರಾಜ ಅವರು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಮೂರು ವೈಯಕ್ತಿಕ ಓಟದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಸೆ.25ರಂದು ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ವೆಂಕಟೇಶ್, 1500 ಮೀಟರ್, 3000 ಮೀಟರ್ ಹಾಗೂ 5000 ಮೀಟರ್ ಓಟದ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಮೂರರಲ್ಲಿಯೂ ಪ್ರಥಮ ಸ್ಥಾನ ಗಳಿಸಿದ್ದಾರೆ. ಈ ಮೂಲಕ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಅರ್ಹತೆ ಪಡೆದುಕೊಂಡಿದ್ದಾರೆ.
ಮೂರು ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದ ಸಾಧನೆಗಾಗಿ ವೆಂಕಟೇಶ್ ಅವರಿಗೆ ‘ವೀರಾಗ್ರಣಿ’ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿದೆ.
ವಿದ್ಯಾರ್ಥಿಯ ಸಾಧನೆಗೆ ಕಾಲೇಜಿನ ಪ್ರಾಚಾರ್ಯ ಶಾಮರಾವ್ ಜಿ., ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್ ಉಳಿಮೇಶ್ವರ, ಉಪನ್ಯಾಸಕರು ಹಾಗೂ ಹಟ್ಟಿಯ ಸಾರ್ವಜನಿಕರು ಅಭಿನಂದನೆ ಸಲ್ಲಿಸಿ, ರಾಜ್ಯಮಟ್ಟದಲ್ಲಿಯೂ ಉತ್ತಮ ಸಾಧನೆ ಮಾಡಿ ಕಾಲೇಜು ಹಾಗೂ ಹಟ್ಟಿ ಪ್ರದೇಶಕ್ಕೆ ಕೀರ್ತಿ ತರಲಿ ಎಂದು ಶುಭ ಹಾರೈಸಿದ್ದಾರೆ.



