ಹಟ್ಟಿ ಚಿನ್ನದ ಗಣಿ: ಪಟ್ಟಣದ ದಿ. ಕಾಮ್ರೇಡ್ ಅರವಿಂದ್ ಮಳೆಬನ್ನೂರು ಗ್ರಂಥಾಲಯದಲ್ಲಿ ಮಹಾನ್ ಕ್ರಾಂತಿಕಾರಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಭಗತ್ ಸಿಂಗ್ ಅವರ ಜಯಂತಿಯನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಭಗತ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಲಾಯಿತು. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಭಗತ್ ಸಿಂಗ್ ಅವರ ಹೋರಾಟ, ತ್ಯಾಗ, ಬಲಿದಾನ ಹಾಗೂ ಕ್ರಾಂತಿಕಾರಿ ವಿಚಾರಧಾರೆಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.

ಭಗತ್ ಸಿಂಗ್ ಅವರ ದೇಶಪ್ರೇಮ, ಧೈರ್ಯ ಮತ್ತು ಹೋರಾಟದ ಮನೋಭಾವ ಇಂದಿನ ಯುವ ಪೀಳಿಗೆಗೆ ಸ್ಫೂರ್ತಿಯಾಗಬೇಕು. ದೇಶಕ್ಕಾಗಿ ಅವರು ಕಂಡ ಕನಸುಗಳು ಹಾಗೂ ಪ್ರತಿಪಾದಿಸಿದ ಆದರ್ಶಗಳನ್ನು ಯುವಜನರು ಅರಿತುಕೊಂಡು ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಕಾ. ಜಿ.ಎಸ್. ಹನುಮಂತ, ಕಾ. ತಿಪ್ಪಣ್ಣ ಮಚನೂರು, ಗಂಗಪ್ಪ ಶಾಖೋದಿ, ಪೆಚಲಮ್ಮ, ಬಾಬು ಸಾಗರ್, ಚಂದ್ರಶೇಖರ್ ಚಿತ್ರನಾಳ್, ಮೌನುದ್ದೀನ್ ಬೂದಿದಿನಾಳ್, ರಂಗನಾಥ, ನಾಗರಾಜ್, ಪಾಮಣ್ಣ, ಕರಿಯಪ್ಪ, ಸುಂದರ್ ಸೇರಿದಂತೆ ಎಐಟಿಯುಸಿ ಕಾರ್ಮಿಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.