ದೇವದುರ್ಗ: ತಾಲೂಕಿನ ಜಾಲಹಳ್ಳಿಯಲ್ಲಿ ಸರ್ಕಾರದ ವತಿಯಿಂದ ಹತ್ತಿ ಹಾಗೂ ಭತ್ತ ಖರೀದಿ ಕೇಂದ್ರಗಳನ್ನು ಕೂಡಲೇ ಆರಂಭಿಸಬೇಕು. ಅನಧಿಕೃತ ಖರೀದಿ ಕೇಂದ್ರಗಳ ವಿರುದ್ಧ ಕ್ರಮ ಕೈಗೊಂಡು, ‘ಶೂಟ್’ ಹೆಸರಿನಲ್ಲಿ ರೈತರ ಹತ್ತಿಯ ತೂಕ ಕಡಿತ ಮಾಡುವುದನ್ನು ಹಾಗೂ ನಕಲಿ ಬಿಲ್ ನೀಡುವುದನ್ನು ತಡೆಯಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜಾಲಹಳ್ಳಿ ಗ್ರಾಮ ಸಮಿತಿ ವತಿಯಿಂದ ಸೋಮವಾರ ಎಪಿಎಂಸಿ ಅಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಜಾಲಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಹತ್ತಿ ಖರೀದಿ ಕೇಂದ್ರಗಳಲ್ಲಿ ರೈತರಿಂದ ‘ಶೂಟ್’ ಹೆಸರಿನಲ್ಲಿ ತೂಕ ಕಡಿತ ಮಾಡಲಾಗುತ್ತಿದೆ ಹಾಗೂ ನಕಲಿ ಬಿಲ್ ನೀಡಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಈ ಕುರಿತು ಅಧಿಕಾರಿಗಳು ಸಮಗ್ರ ಪರಿಶೀಲನೆ ನಡೆಸಿ, ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ಮುಖಂಡರು ಒತ್ತಾಯಿಸಿದರು.

ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಖರೀದಿ ಕೇಂದ್ರಗಳ ಪರವಾನಗಿ ಹಾಗೂ ದಾಖಲೆಗಳನ್ನು ಪರಿಶೀಲಿಸಿ, ತಪ್ಪುಗಳು ಕಂಡುಬಂದಲ್ಲಿ ಅಂತಹ ಅಂಗಡಿಗಳ ವಿರುದ್ಧ ಕ್ರಮ ಕೈಗೊಂಡು ಮುಚ್ಚಬೇಕು. ರೈತರ ಉತ್ಪನ್ನಗಳಿಗೆ ನ್ಯಾಯಸಮ್ಮತ ತೂಕ ಹಾಗೂ ಪಾರದರ್ಶಕ ಬಿಲ್ ವ್ಯವಸ್ಥೆ ಇರಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಮನವಿಗೆ ಸ್ಪಂದಿಸಿದ ಅಧಿಕಾರಿಗಳು, ಜಾಲಹಳ್ಳಿಯ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ನಿಯಮ ಉಲ್ಲಂಘಿಸಿರುವುದು ಕಂಡುಬಂದಲ್ಲಿ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಜೊತೆಗೆ ಸರ್ಕಾರದ ವತಿಯಿಂದ ಹತ್ತಿ ಮತ್ತು ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನರಸಣ್ಣ ನಾಯಕ, ಮೌನೇಶ ಜಾಲಹಳ್ಳಿ, ಹನುಮಂತ ಗುರಿಕಾರ, ಹನುಮಂತ ಮಡಿವಾಳ, ರಂಗನಾಥ ಬುಂಕಲದೊಡ್ಡಿ, ದುರುಗಪ್ಪ ಹೊರಟ್ಟಿ, ಬಸವರಾಜ ವಂದ್ಲಿ, ಮುಕ್ಕನಗೌಡ, ಹನುಮಂತ ಮಂಡಲಗುಡ್ಡ, ಸಿದ್ದಯ್ಯ ಗಲಗ್, ದುರುಗಪ್ಪ ಗಾಜಲದಿನ್ನಿ, ಪ್ರಾಣೇಶ ಗಾಜಲದಿನ್ನಿ, ನಾಗರಾಜ, ಭೀಮಣ್ಣ ಪಂದ್ಯಾನ ಸೇರಿದಂತೆ ರೈತ ಸಂಘದ ಮುಖಂಡರು ಉಪಸ್ಥಿತರಿದ್ದರು.