ಮಾನ್ವಿ: ಪಟ್ಟಣದ ರಾಯಚೂರು–ಸಿಂಧನೂರು ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ತಾಲೂಕು ಆಡಳಿತ ಭವನ ‘ಪ್ರಜಾಸೌಧ’ ಕಾಮಗಾರಿಯನ್ನು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಪರಿಶೀಲಿಸಿ, ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಲೂಕಿನ ಜನರಿಗೆ ವಿವಿಧ ಇಲಾಖೆಗಳ ಸೇವೆಗಳು ಒಂದೇ ಸ್ಥಳದಲ್ಲಿ ದೊರೆಯುವಂತೆ ಮಾಡುವ ಉದ್ದೇಶದಿಂದ ಸರ್ಕಾರ ತಾಲೂಕು ಆಡಳಿತ ಭವನ ‘ಪ್ರಜಾಸೌಧ’ವನ್ನು ನಿರ್ಮಿಸುತ್ತಿದೆ. ಆದರೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು.

ಪ್ರಜಾಸೌಧ ಕಾಮಗಾರಿ ಈಗ ಅಂತಿಮ ಹಂತದಲ್ಲಿದ್ದು, ಉಳಿದಿರುವ ಕೆಲಸಗಳನ್ನು ವಿಳಂಬ ಮಾಡದೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಕಟ್ಟಡವನ್ನು ಶೀಘ್ರ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವ ಮೂಲಕ ತಾಲೂಕಿನ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಎನ್.ಎಸ್. ಬೋಸರಾಜು ಸೂಚಿಸಿದರು.

ಕಾಮಗಾರಿಯ ಗುಣಮಟ್ಟಕ್ಕೂ ಆದ್ಯತೆ ನೀಡಬೇಕು. ವಿವಿಧ ಇಲಾಖೆಗಳ ಕಚೇರಿಗಳು ಒಂದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುವುದರಿಂದ ಸಾರ್ವಜನಿಕರು ತಮ್ಮ ಕೆಲಸಗಳಿಗೆ ಹಲವು ಕಡೆ ಅಲೆದಾಡುವ ಅವಶ್ಯಕತೆ ಕಡಿಮೆಯಾಗಲಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಜಿ. ಹಂಪಯ್ಯ ನಾಯಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್, ಪಂಚ ಗ್ಯಾರಂಟಿಗಳ ಅಧ್ಯಕ್ಷ ಬಿ.ಕೆ. ಅಮರೇಶಪ್ಪ ವಕೀಲರು, ಎ. ಬಾಲಸ್ವಾಮಿ ಕೊಡ್ಲಿ, ಸೈಯದ್ ಖಾಲಿದ್ ಖಾದ್ರಿ, ಹನುಮೇಶ್ ಮದ್ಲಾಪುರ್, ರಾಜಾ ಸುಭಾಷ್ ಚಂದ್ರ ನಾಯಕ್, ಮಹೇಶ್ ಗೌಡ ಗವಿಗಟ್, ಮಹಾಂತೇಶ ಸ್ವಾಮಿ, ಸತ್ತಾರ್ ಬಂಗ್ಲೆವಾಲೆ, ಕಾಮೇಶ್, ಹಂಪಯ್ಯ ನಾಯಕ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.