ಹಟ್ಟಿ ಚಿನ್ನದ ಗಣಿ: ಸಮೀಪದ ಗೆಜ್ಜಲಗಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಲೋಗಲ್ ಕ್ರಾಸ್ನಲ್ಲಿ ದೀರ್ಘಕಾಲದಿಂದ ಮುಂದುವರಿದಿರುವ ಕುಡಿಯುವ ನೀರಿನ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕು ಹಾಗೂ ಚಿಕ್ಕನಗನೂರಿನ ಕರ ವಸೂಲಿಗಾರರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಂಘಟನೆ (ಎಐಕೆಎಸ್) ಪದಾಧಿಕಾರಿಗಳು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು.
ನಿಲೋಗಲ್ ಕ್ರಾಸ್ನಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಸೆ.5ರಂದು ಸಾರ್ವಜನಿಕರೊಂದಿಗೆ ಧರಣಿ ನಡೆಸಲಾಗಿತ್ತು. ಆದರೂ ಇದುವರೆಗೆ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸಂಘಟನೆಯ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಚಿಕ್ಕನಗನೂರಿನ ಕರ ವಸೂಲಿಗಾರ ಯಂಕಪ್ಪ/ಅಮಲಯ್ಯ ಅವರ ಕುರಿತು ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಲೋಗಲ್ ಕ್ರಾಸ್ನ ಕುಡಿಯುವ ನೀರಿನ ಸಮಸ್ಯೆಯನ್ನು ತಕ್ಷಣ ಬಗೆಹರಿಸಬೇಕು, ಸಂಬಂಧಪಟ್ಟ ಕರ ವಸೂಲಿಗಾರರನ್ನು ವರ್ಗಾವಣೆ ಮಾಡಬೇಕು ಹಾಗೂ ಸಾರ್ವಜನಿಕರಿಂದ ಬಂದಿರುವ ದೂರುಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಬೇಡಿಕೆಗಳ ಈಡೇರಿಕೆಗೆ ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸದಿದ್ದಲ್ಲಿ ಎಐಕೆಎಸ್ ನೇತೃತ್ವದಲ್ಲಿ ಕಾನೂನುಬದ್ಧ ಹಾಗೂ ಶಾಂತಿಯುತ ಹೋರಾಟ, ಪ್ರತಿಭಟನೆ ಮತ್ತು ಜನಾಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆಯ ಪದಾಧಿಕಾರಿಗಳು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ಕಿಸಾನ್ ಸಂಘಟನೆಯ ತಾಲೂಕು ಅಧ್ಯಕ್ಷ ಶರಣಪ್ಪ ಸಾಲಿ, ವಿನಯ್ ಕುಮಾರ್ ಚಿಕ್ಕನಾಗನೂರು, ಅಂಬಣ್ಣ ಭಜಂತ್ರಿ, ಹುಸೇನ್ ಸಾಬ್ ನಿಲೋಗಲ್, ಖಾಜಾ ಸಾಬ್ ಸೇರಿದಂತೆ ಇತರರು ಉಪಸ್ಥಿತರಿದ್ದರು.



