ಮಾನ್ವಿ: ಸಮಾಜ ಸೇವೆಗೆ ವಯಸ್ಸು ಅಡ್ಡಿಯಲ್ಲ ಎಂಬುದನ್ನು ತಮ್ಮ ಕಾರ್ಯಗಳ ಮೂಲಕ ತೋರಿಸುತ್ತಿರುವ ತಾಲೂಕಿನ ಜೀನೂರು ಗ್ರಾಮದ ಯುವ ವಿದ್ಯಾರ್ಥಿನಿ ಭಾಗ್ಯಶ್ರೀ, ಅನಾಥರು, ವೃದ್ಧರು, ದಿವ್ಯಾಂಗರು ಹಾಗೂ ಸಂಕಷ್ಟದಲ್ಲಿರುವ ನಿರ್ಗತಿಕರಿಗೆ ಕೈಲಾದ ನೆರವು ನೀಡುವ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುತ್ತಿದ್ದಾರೆ.

ನಾಳೆ (ಸೆ.30) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಭಾಗ್ಯಶ್ರೀ, ಜನ್ಮದಿನವನ್ನು ಕೇವಲ ಸಂಭ್ರಮಕ್ಕೆ ಸೀಮಿತಗೊಳಿಸದೆ ಸಮಾಜ ಸೇವೆಯ ಸಂಕಲ್ಪವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುವ ದಿನವನ್ನಾಗಿ ಕಾಣುತ್ತಿರುವುದು ವಿಶೇಷವಾಗಿದೆ.

ಬೀದಿ ಬದಿಯಲ್ಲಿ ಆಶ್ರಯವಿಲ್ಲದೆ ಜೀವನ ನಡೆಸುತ್ತಿರುವ ಅನಾಥರು, ವೃದ್ಧರು, ದೃಷ್ಟಿಹೀನರು ಹಾಗೂ ಸಂಕಷ್ಟದಲ್ಲಿರುವವರಿಗೆ ಆಹಾರ ಮತ್ತು ಅಗತ್ಯ ವಸ್ತುಗಳನ್ನು ಒದಗಿಸುವುದರ ಜೊತೆಗೆ, ಅವರೊಂದಿಗೆ ಆತ್ಮೀಯವಾಗಿ ಮಾತನಾಡಿ ಧೈರ್ಯ ತುಂಬುವ ಕೆಲಸದಲ್ಲಿಯೂ ಭಾಗ್ಯಶ್ರೀ ತೊಡಗಿಸಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಇಂತಹ ಮಾನವೀಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅವರ ಸೇವಾ ಮನೋಭಾವ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

“ಸಮಾಜ ಸೇವೆಗೆ ನನ್ನ ತಂದೆ-ತಾಯಿಯೇ ಸ್ಫೂರ್ತಿ. ಅವರು ಕಲಿಸಿದ ಮಾನವೀಯ ಮೌಲ್ಯಗಳೇ ಈ ಕಾರ್ಯಕ್ಕೆ ನನ್ನನ್ನು ಪ್ರೇರೇಪಿಸಿವೆ. ನಾನು ಯಾವುದೇ ಜಾತಿ, ಧರ್ಮ ಅಥವಾ ರಾಜಕೀಯದ ಪರವಾಗಿ ಕೆಲಸ ಮಾಡುವುದಿಲ್ಲ. ಮಾನವೀಯತೆಯೇ ನನ್ನ ಧರ್ಮ; ಸಂಕಷ್ಟದಲ್ಲಿರುವವರಿಗೆ ನೆರವಾಗುವುದೇ ನನ್ನ ಗುರಿ” ಎಂದು ಭಾಗ್ಯಶ್ರೀ ತಿಳಿಸಿದರು.

“ನಾನು ಯಾವುದೇ ಧರ್ಮದ ಪ್ರಚಾರಕಿ ಅಲ್ಲ, ಮಾನವ ಧರ್ಮದ ಸೇವಕಿ. ಪ್ರೀತಿ, ಸಹಾಯ, ಸೌಹಾರ್ದತೆ, ಭ್ರಾತೃತ್ವ, ಪ್ರಾಮಾಣಿಕತೆ, ನ್ಯಾಯ, ತ್ಯಾಗ ಮತ್ತು ಔದಾರ್ಯವೇ ಸಮಾಜ ಸೇವೆಯ ನಿಜವಾದ ಮೌಲ್ಯಗಳು. ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿರುವುದೇ ನನಗೆ ನಿಜವಾದ ಸಂತೋಷ” ಎಂದು ಹೇಳಿದರು.

ಭಾಗ್ಯಶ್ರೀ ಅವರ ಸಮಾಜ ಸೇವೆಯ ಪಯಣ ಇನ್ನಷ್ಟು ವಿಸ್ತರಿಸಿ, ಹೆಚ್ಚಿನ ನಿರ್ಗತಿಕರು ಹಾಗೂ ಸಂಕಷ್ಟದಲ್ಲಿರುವವರಿಗೆ ಆಸರೆಯಾಗಲಿ ಎಂದು ಸಾರ್ವಜನಿಕರು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಜೀನೂರಿನ ಈ ಯುವ ವಿದ್ಯಾರ್ಥಿನಿಯ ಮಾನವೀಯ ಸೇವೆ ಇತರ ಯುವಜನರಿಗೂ ಪ್ರೇರಣೆಯಾಗುತ್ತಿದೆ.