ಸಿಂಧನೂರು, ಸೆ.30: ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ, ಮೇಲಾಧಿಕಾರಿಗಳ ಆದೇಶ ಪಾಲಿಸದಿರುವುದು, ಕೇಂದ್ರಸ್ಥಾನದಲ್ಲಿ ಹಾಜರಿರದೆ ಸಾರ್ವಜನಿಕ ಕುಡಿಯುವ ನೀರಿನ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸದಿರುವುದು ಸೇರಿದಂತೆ ಹಲವು ಆರೋಪಗಳ ಹಿನ್ನೆಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಸಿಂಧನೂರು ಕಚೇರಿಯ ಕಿರಿಯ ಅಭಿಯಂತರ ಶ್ರೀ ನಾಗರಾಜ ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದೇಶಿಸಿದ್ದಾರೆ.

ಈ ಕುರಿತು ಸೆ.28ರಂದು ಹೊರಡಿಸಿರುವ ಆದೇಶದಲ್ಲಿ, ಕಿರಿಯ ಅಭಿಯಂತರ ನಾಗರಾಜ ಅವರ ವಿರುದ್ಧದ ಆರೋಪಗಳು ಹಾಗೂ ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿದ ವರದಿಗಳನ್ನು ಪರಿಶೀಲಿಸಿ ಕ್ರಮಕ್ಕೆ ಸೂಚಿಸಲಾಗಿದೆ.

ದಾಖಲೆಗಳ ಪ್ರಕಾರ, ಪೂರ್ವ ಪ್ರಮಾಣದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕರ್ತವ್ಯಕ್ಕೆ ಹಾಜರಾದ ನಂತರವೂ ಎಸ್‌ಬಿಆರ್‌ನಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರೊಂದಿಗೆ ಸೇರಿ ಸಹಿ ಮಾಡುವ ಅಧಿಕಾರದ ವ್ಯಾಪ್ತಿಯನ್ನು ಮೀರಿ ಕಿರಿಯ ಅಭಿಯಂತರರು ಕಾರ್ಯನಿರ್ವಹಿಸಿರುವ ಆರೋಪ ಉಲ್ಲೇಖಿಸಲಾಗಿದೆ. ಸಿಟಿಸಿ ಹಾಗೂ ಎಸ್‌ಬಿಆರ್ ದಾಖಲೆಗಳಲ್ಲಿ 2024ರ ಜೂನ್ 20ರಿಂದ ಜುಲೈ 5ರವರೆಗೆ ಮತ್ತು ಜೂನ್ 21ರಿಂದ ಜುಲೈ 6ರವರೆಗೆ ಒಟ್ಟು 18 ಬಿಲ್‌ಗಳಿಗೆ ಸಹಿ ಮಾಡಿರುವ ವಿಷಯವೂ ದಾಖಲೆಗಳಲ್ಲಿ ಪ್ರಸ್ತಾಪವಾಗಿದೆ.

ಈ ಪೈಕಿ 12 ಬಿಲ್‌ಗಳಿಗೆ ನಂತರ ಶಶಿಧರ್ ಹಾಗೂ 6 ಬಿಲ್‌ಗಳಿಗೆ ನಾಗರಾಜ ಅವರು ಸಹಿ ಮಾಡಿರುವುದು ಕಂಡುಬಂದಿದ್ದು, ಈ ರೀತಿಯ ಕ್ರಮ ಮೇಲಾಧಿಕಾರಿಗಳ ಆದೇಶಕ್ಕೆ ವಿರುದ್ಧವಾಗಿದೆ ಎಂಬ ಅಂಶವನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೆ, 2024ರ ಜುಲೈ 5ರ ಲಾಗ್‌ಬುಕ್ ಪರಿಶೀಲಿಸಿದಾಗ ಗುಂಡಾ ಗ್ರಾಮದ ಕಾಮಗಾರಿಯನ್ನು ಪರಿಶೀಲಿಸಲು ಕೇಂದ್ರಸ್ಥಾನಕ್ಕೆ ತೆರಳಿರುವುದಾಗಿ ದಾಖಲಿಸಿದ್ದರೂ, ಅದೇ ದಿನ ತಿಡಿಗೋಳ, ಗೋರೇಬಾಳ, ಉದ್ಬಾಳ (ಯು), ಸುಲ್ತಾನಪುರ, ರೌಡಕುಂದಾ, ಸಾಲಗುಂದ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿರುವುದಾಗಿ ನಮೂದಿಸಿರುವ ಬಗ್ಗೆ ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ಲಾಗ್‌ಬುಕ್ ಹಾಗೂ ಮಾಸಿಕ ದಿನಚರಿಯಲ್ಲಿನ ಪ್ರವಾಸ ಮತ್ತು ಕರ್ತವ್ಯದ ವಿವರಗಳಲ್ಲಿಯೂ ವ್ಯತ್ಯಾಸಗಳಿರುವುದನ್ನು ಪ್ರಾಧಿಕಾರ ಗಮನಿಸಿದೆ.

ಸೆ.21, 2026ರಂದು ನಡೆದ ಇಲಾಖೆಯ ಸಭೆಯಲ್ಲಿ ಕೆರೆಗಳಿಗೆ ಬಂದು ಸೇರುವ ಸಿಲ್ಟ್ ಹಾಗೂ ಸಂಬಂಧಿತ ಸಮಸ್ಯೆಗಳ ಕುರಿತು ಟೆಬಲ್‌ವಾರು ನಿಂದ ತೆಗೆದು, ಸೆ.1ರಿಂದ 21ರವರೆಗೆ ಕೈಗೊಂಡ ಕಾರ್ಯಗಳ ಕುರಿತು ಮಾಹಿತಿ ನೀಡುವಂತೆ ಸೂಚಿಸಿದ್ದರೂ, ದಾಖಲೆಗಳಲ್ಲಿ ಸಮರ್ಪಕವಾಗಿ ನಮೂದು ಮಾಡದಿರುವುದನ್ನೂ ಗಂಭೀರವಾಗಿ ಪರಿಗಣಿಸಲಾಗಿದೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಮೇಲಾಧಿಕಾರಿಗಳು ನೀಡಿದ ಆದೇಶಗಳನ್ನು ಪಾಲಿಸದಿರುವುದು, ಅಧಿಕಾರದ ವ್ಯಾಪ್ತಿ ಮೀರಿ ಕಾರ್ಯನಿರ್ವಹಿಸಿರುವ ಆರೋಪ, ಕೆರೆಗಳ ದಾಖಲೆಗಳಲ್ಲಿ ಸಮರ್ಪಕ ಮಾಹಿತಿ ನಮೂದಿಸದಿರುವುದು, ಕರ್ತವ್ಯಕ್ಕೆ ಸಂಬಂಧಿಸಿದ ದಾಖಲೆಗಳಲ್ಲಿ ವ್ಯತ್ಯಾಸ ಹಾಗೂ ಸಾರ್ವಜನಿಕರ ಕುಡಿಯುವ ನೀರಿನ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸದಿರುವುದು ಸೇರಿದಂತೆ ಹಲವು ಅಂಶಗಳನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಸೆ.15 ಮತ್ತು 16ರಂದು ನೀರಿನ ಸಮಸ್ಯೆಗೆ ಸಂಬಂಧಿಸಿದ ದೂರುಗಳು ಬಂದಿದ್ದರೂ ಸಮರ್ಪಕ ಪ್ರತಿಕ್ರಿಯೆ ನೀಡಿಲ್ಲ ಎಂಬ ಆರೋಪವೂ ದಾಖಲಾಗಿದೆ. ಸೆ.24ರಂದು ಮಧ್ಯರಾತ್ರಿ ಸುಮಾರು 12.05 ಗಂಟೆಗೆ ಸರ್ಕಾರಿ ನೌಕರರ ವಾಟ್ಸಾಪ್ ಗುಂಪಿನಲ್ಲಿ ಮೇಲಾಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವ ರೀತಿಯಲ್ಲಿ ಸಂದೇಶ ಹಾಕಿರುವುದನ್ನೂ ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ.

ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ನಾಗರಾಜ ಅವರ ವಿರುದ್ಧ ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು, 2021ರ ನಿಯಮ 3(1)(i), (ii) ಮತ್ತು (iii) ಉಲ್ಲಂಘನೆಯ ಆರೋಪದಡಿ ಇಲಾಖಾ ವಿಚಾರಣೆ ನಡೆಸಲು ಆದೇಶಿಸಲಾಗಿದೆ.

ಅದರಂತೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳು–1958ರ ನಿಯಮ 98ರ ಅನ್ವಯ ಇಲಾಖಾ ವಿಚಾರಣೆಯನ್ನು ನಡೆಸಿ, ಆರೋಪಗಳಿಗೆ ಸಂಬಂಧಿಸಿದಂತೆ ಸ್ಪಷ್ಟವಾದ ಅಭಿಪ್ರಾಯದೊಂದಿಗೆ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೂಚಿಸಿದ್ದಾರೆ.