ಸಿಂಧನೂರು, ಸೆ.30: ಜೀವನದಲ್ಲಿ ಎದುರಾಗುವ ಒತ್ತಡ, ನಿರಾಶೆ ಹಾಗೂ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸುವ ಮನೋಸ್ಥೈರ್ಯವನ್ನು ಯುವಜನರು ಬೆಳೆಸಿಕೊಳ್ಳಬೇಕು. ಆತ್ಮಹತ್ಯೆ ತಡೆಗಟ್ಟುವಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋಶಾಸ್ತ್ರಜ್ಞ ಅರುಣ್ ಕುಮಾರ್ ಕುಲಕರ್ಣಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ಪ್ರಾಥಮಿಕ ಆರೋಗ್ಯ ಕೇಂದ್ರ ಜವಳಗೇರಾ ಹಾಗೂ ಸನ್ ರೈಸ್ ಪ್ಯಾರಾ ಮೆಡಿಕಲ್ ಕಾಲೇಜು ಸಿಂಧನೂರು ಇವರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನಲ್ಲಿ ಆಯೋಜಿಸಿದ್ದ ಆತ್ಮಹತ್ಯೆ ತಡೆಗಟ್ಟುವ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವಜನರಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಜೀವನಶೈಲಿ ಹಾಗೂ ಜೀವನ ನಿರ್ವಹಣೆಯಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಖಿನ್ನತೆ, ನಿರಾಶೆ ಮತ್ತು ಒತ್ತಡದಂತಹ ಸಮಸ್ಯೆಗಳ ಲಕ್ಷಣಗಳನ್ನು ಗುರುತಿಸಿ, ಅಗತ್ಯವಿದ್ದಾಗ ನೆರವು ಪಡೆಯಲು ಹಿಂಜರಿಯಬಾರದು. ಸಂಕಷ್ಟದಲ್ಲಿರುವ ಸ್ನೇಹಿತರು ಹಾಗೂ ಪರಿಚಿತರ ಸಮಸ್ಯೆಗಳನ್ನು ಆಲಿಸಿ ಅವರಿಗೆ ಸೂಕ್ತ ನೆರವು ದೊರೆಯುವಂತೆ ಸಹಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಮಾತನಾಡಿ, ಸಮುದಾಯದಲ್ಲಿ ಆತ್ಮಹತ್ಯೆ ತಡೆ ಕುರಿತು ವ್ಯಾಪಕ ಜಾಗೃತಿ ಮೂಡಿಸುವ ಅಗತ್ಯವಿದೆ. ಬರಗಾಲ, ಆರ್ಥಿಕ ಸಂಕಷ್ಟ, ವೈಯಕ್ತಿಕ ಹಾಗೂ ಸಾಮಾಜಿಕ ಒತ್ತಡಗಳು ರೈತರು, ಯುವಕರು, ವಿದ್ಯಾರ್ಥಿಗಳು ಮತ್ತು ನೌಕರರ ಮೇಲೆ ಪರಿಣಾಮ ಬೀರಬಹುದು. ಇಂತಹ ಸಂದರ್ಭಗಳಲ್ಲಿ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ ಎಂಬ ಅರಿವು ಮೂಡಿಸಿ, ಸಂಕಷ್ಟಗಳನ್ನು ಎದುರಿಸುವ ಧೈರ್ಯ ಹಾಗೂ ಅಗತ್ಯ ನೆರವು ಪಡೆಯುವ ಮನೋಭಾವ ಬೆಳೆಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಆತ್ಮಹತ್ಯೆ ತಡೆಗಟ್ಟುವ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕುಟುಂಬದವರು, ಸ್ನೇಹಿತರು ಹಾಗೂ ಸಹೋದ್ಯೋಗಿಗಳ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು, ಸಂಕಷ್ಟದಲ್ಲಿರುವವರನ್ನು ಪ್ರೀತಿಯಿಂದ ಮಾತನಾಡಿಸಿ ನೆರವಾಗುವುದು, ಕಠಿಣ ಸಂದರ್ಭಗಳಲ್ಲಿ ಸಹಾಯ ಪಡೆಯಲು ಹಿಂಜರಿಯದಿರುವುದು, ಮಾದಕ ವಸ್ತು ಮತ್ತು ಮದ್ಯಪಾನದಿಂದ ದೂರವಿರುವುದು ಹಾಗೂ ಆತ್ಮಹತ್ಯೆ ತಡೆ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವುದಾಗಿ ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಲಕ್ಷ್ಮೀದೇವಿ, ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು, ಆಶಾ ಕಾರ್ಯಕರ್ತೆಯರು ಹಾಗೂ ಸನ್ ರೈಸ್ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.



