ಈ ಬಾರಿ ಅಂತೂ ಇಂತೂ ಗೌರಿ ಹಬ್ಬಕ್ಕೆ ಊರಿಗೆ ಹೋಗುವುದು ನಿಶ್ಚಯವಾಯಿತು. ಊರಿಗೆ ಹೋದಾಗ ವಿಷಯ ತಿಳಿಯಿತು ಲತಾಳಿಗೆ ಆರೋಗ್ಯ ಸರಿ ಇಲ್ಲವೆಂದು ಹಾಗೂ ಮೈಸೂರಿನ ಆಸ್ಪತ್ರೆಗೆ ದಾಖಲಾಗಿರುವುದು. ನನಗೂ ತುಂಬಾ ವರ್ಷವೇ ಆಗಿತ್ತು, ಅವಳನ್ನು ಭೇಟಿ ಮಾಡಿ, ಗೌರಿ ಹಬ್ಬಕ್ಕೆ ಅವಳು ಊರಿಗೆ ಬಂದಿರುತ್ತಾಳೆ ಇಬ್ಬರೂ ತುಂಬಾ ಹೊತ್ತು ಹರಟೆ ಕಾರ್ಯಕ್ರಮ ನಡೆಸಬಹುದು ಎಂಬ ಆಸೆಯೂ ಚಿಗುರೊಡೆದಿತ್ತು. ಆದರೆ ವಿಷಯ ಪೂರ್ಣ ತಿಳಿಯಬೇಕೆಂದು ಅಮ್ಮನನ್ನು ಕಾರಣ ಏನೆಂದು ಕೇಳಿದಾಗ, ಅವಳ ಮಗಳ ಚಿಂತೆಯಂತೆ ಅಂತ ಹೇಳಿದರು ಅಷ್ಟೇ ಲತ ನನ್ನ ಬಾಲ್ಯದ ಗೆಳತಿ ಯಾಕೋ ಮನಸ್ಸಿಗೆ ಕಸಿವಿಸಿ ಆಯಿತು. ಲತಾಳ ಮನೆಗೆ ಹೋಗಿ ವಿಚಾರಿಸಿದಾಗ ಲತಾಳ ತಾಯಿ ಕಣ್ಣೀರು ಒರೆಸಿಕೊಂಡು ತನ್ನ ಗೋಳನ್ನು ತೋಡಿಕೊಂಡರು. ಅವರ ಮಾತು ಕೇಳಿ ನನಗೆ ತುಂಬಾ ಬೇಸರವಾಯಿತು.
ಆಗ ನಾನು ಮತ್ತು ಲತಾ ಬೆಳೆದ 80 ರ ದಶಕದಲ್ಲಿ ನಿಜಕ್ಕೂ ನಾವೇ ಧನ್ಯರು ಅನಿಸಿತು. ಕಾರಣ ಈಗಿನ ಹೆಣ್ಣು ಮತ್ತು ಗಂಡು ಮಕ್ಕಳಲ್ಲಿ ಬೆಳೆಯುವ ರೀತಿನೇ ಬೇರೆಯಾಗಿದೆ. ನಾವು ಬೆಳೆದ ರೀತಿನೇ ಬೇರೆ ಆಗ ನಮ್ಮ ಹತ್ತಿರ ಮೊಬೈಲ್, ಜಂಗಮವಾಣಿ ಇರಲಿಲ್ಲ. ದೊಡ್ಡವರಿಗೆ ಗೌರವ ಸಂಸ್ಕಾರ, ಸಂಸ್ಕೃತಿ, ಅಡುಗೆ ಮನೆ ಕೆಲಸ, ಮನೆ ಸ್ವಚ್ಛಗೊಳಿಸುವುದು ಅಂತ ಎಲ್ಲಾ ಕೆಲಸವನ್ನು ಕಲಿಸಿದ್ದರು ನಮ್ಮ ಅಮ್ಮಂದಿರು ಹಾಗೂ ನಾವು ಶ್ರದ್ಧೆಯಿಂದ ಕಲಿತಿದ್ದೆವು. ಆದರೆ ಲತಾಳ ಮಗಳು ಕೇವಲ ಮೊಬೈಲ್ ನೋಡಿಕೊಂಡು ತಂದೆ ತಾಯಿ ಮಾತು ಕೇಳದೆ ಮನೆ ಕೆಲಸ, ಓದು ಯಾವುದರಲ್ಲೂ ಆಸಕ್ತಿ ಇಲ್ಲದೆ ಅವಳು ಅವಳ ಮೊಬೈಲ್ ಜೊತೆ ತನ್ನ ಕೋಣೆಯಲ್ಲಿ ಕಾಲ ಕಳೆಯುತ್ತಿದ್ದಳು. ಇದಕ್ಕೆಲ್ಲಾ ಕಾರಣವೇನು ಮೊಬೈಲ್ ಅಷ್ಟೇನಾ? ಅವಳ ತಂದೆ ತಾಯಿ ಒಬ್ಬಳೇ ಮಗಳು ಎಂಬುದಾಗಿ ಬಹಳ ಮುದ್ದಿನಿಂದ ಬೆಳೆಸಿರುವ ರೀತಿನಾ?
ಈ ಸಮಾಜದ ಆಧುನಿಕ ಜೀವನ ಶೈಲಿಯೇ? ಯಾವುದರಬೇಕೆಂದು ಯೋಚಿಸಿದರೆ ಹಲವು ವಿಚಾರಗಳು ತಲೆಯಲ್ಲಿ ಸುಳಿದು ಹೋಗುತ್ತದೆ. ಆದರೆ ಏನೇ ಆಗಲಿ ಮನೆಯಲ್ಲಿ ತಾಯಂದಿರು ಗಂಡು ಮಕ್ಕಳಿಗಾಗಲಿ, ಹೆಣ್ಣು ಮಕ್ಕಳಿಗಾಗಲಿ, ಮೊದಲಿಗೆ ಸಂಸ್ಕಾರ ಕಲಿಸಬೇಕು, ಯಾರೇ ಬಂದರೂ ಮನೆಗೆ ಹೆಣ್ಣು ಮಕ್ಕಳು ನಗುತ್ತ ಮಾತಾಡಿಸುವ ಪದ್ಧತಿಯನ್ನು ಬೆಳೆಸಿ ಹಸಿದು ಬಂದವರಿಗೆ ಊಟ ಬಡಿಸುವ ರೀತಿ ಹೇಳಿಕೊಡಿ. ಮೊಬೈಲ್ ಅವಶ್ಯಕತೆ ಇದ್ದಷ್ಟು ಮಾತ್ರ ಬಳಸಲು ಅವಕಾಶ ಮಾಡಿಕೊಡಿ. ನಿಮ್ಮ ಮಕ್ಕಳನ್ನು ಓದಲು ಯಾವುದೇ ಪಿ ಜಿ ಅಥವಾ ಹಾಸ್ಟೆಲಿನಲ್ಲಿ ಬಿಟ್ಟಿದ್ದರೆ ಅಲ್ಲಿಯ ಪರಿಸರ, ಅವರ ಸ್ನೇಹಿತರು, ಹಾಸ್ಟೆಲ್ ನಲ್ಲಿರುವ ಸಿಬ್ಬಂದಿಯವರ ಜೊತೆ ನಿಮ್ಮ ಮಕ್ಕಳ ಯೋಗ ಕ್ಷೇಮ ಅವರ ನಡವಳಿಕೆ ಬಗ್ಗೆ ವಿಚಾರಿಸಿ, ನೀವು ಎಷ್ಟೇ ಕೆಲಸದ ಒತ್ತಡದಲ್ಲಿ ಇದ್ದರೂ ಕೂಡ ಮಕ್ಕಳ ಶಾಲಾ-ಕಾಲೇಜಿನ ಪೋಷಕರ ಸಭೆಗೆ ಭಾಗವಹಿಸಿರಿ. ಅವರ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸಿ. ಅಗತ್ಯವಿದ್ದರೆ ಅವರಿಗೆ ತಿಳುವಳಿಕೆ ಹೇಳಿ, ಮಕ್ಕಳ ಜೊತೆ ರಾತ್ರಿ ಒಂದು ಸಮಯದಲ್ಲಾದರೂ ಊಟ ಮಾಡಿ ಮಕ್ಕಳ ಮುಂದೆ ನೆಂಟರನ್ನು ಅಕ್ಕಪಕ್ಕದವರ ಬಗ್ಗೆ ಬೇರೆ ಮಕ್ಕಳ ಬಗ್ಗೆ ಈಯಾಳಿಸಿ ತುಚ್ಛವಾಗಿ ಮಾತನಾಡುವುದನ್ನು ಬಿಡಿ. ಮನೆಯಲ್ಲಿ ಅಥವಾ ಊರಿನಲ್ಲಿ ಅಜ್ಜಿ ಮತ್ತು ತಾತರ ಮಾತನ್ನು ಹಾಗೂ ಅವರನ್ನು ಪ್ರೀತಿಯಿಂದ ಗೌರವಿಸಿ ಮಾತನಾಡುವುದನ್ನು ಕಲಿಸಿ.
ನಿಮ್ಮ ಮಕ್ಕಳು ಹಠ ಮಾಡಿದ್ದಕ್ಕೆ ಅಥವಾ ನಿಮ್ಮ ಪ್ರತಿಷ್ಠೆಗೋಸ್ಕರ ಮಕ್ಕಳು ಕೇಳಿದರು ಎಂಬುದಾಗಿ ಮೊಬೈಲ್, ಸೈಕಲ್, ಬೈಕ್ ಕೊಡಿಸುವುದಕ್ಕೆ ಮುಂದಾಗಬೇಡಿ. ನಿಮ್ಮ ಮನೆಯ ಅಥವಾ ನೀವು ಪಟ್ಟ ಆರ್ಥಿಕ ಪರಿಸ್ಥಿತಿ ಬಗ್ಗೆ ತಿಳಿಸಿ ಮನೆಯಲ್ಲಿ ನಿಮ್ಮ ಹಣಕಾಸಿನ ಬಗ್ಗೆ ಚರ್ಚೆ ಮಾಡಿ. ಮಕ್ಕಳ ಮುಂದೆ ಮಕ್ಕಳು ಕೇಳಿದ ತಕ್ಷಣವೇ ಎಲ್ಲರೂ ಕೊಡಿಸುವುದನ್ನು ಮೊದಲು ಬಿಡಿ ಹಾಗಂತ ಕೊಡಿಸುವುದೇ ಬೇಡ ಅಂತ ಅಲ್ಲ, ಸಮಯ ಸಂದರ್ಭ ನೋಡಿ ಕೊಡಿಸಿ.
ನಮ್ಮ ತಂದೆ ಯಾವಾಗಲೂ ನಾವು ಚಿಕ್ಕವರಿದ್ದಾಗ ಕಲಿಸಿದ ನಡವಳಿಕೆಯ ಒಂದು ಮಾತು ನೆನಪಾಗುತ್ತದೆ ಅವರು ಯಾವಾಗಲೂ ಹೇಳುತ್ತಿದ್ದರು, ಕೈ ಮತ್ತು ಬಾಯಿ ಶುದ್ಧವಾಗಿ ಇಟ್ಟುಕೊಳ್ಳಿ ಎಂದು.. ಕೈ ಎಂದರೆ ಕಳ್ಳತನ ಮಾಡಬೇಡಿ, ಬಾಯಿ ಎಂದರೆ ಸುಳ್ಳು ಹೇಳಬೇಡಿ ಅಂತ ಇದನ್ನು ಕಲಿತರೆ ಭೂಮಿ ಮೇಲೆ ಎಲ್ಲಾದರೂ ಬದುಕಬಹುದು ಎಂಬುದಾಗಿ ಹೇಳುತ್ತಿದ್ದರು. ನಿಜವಾಗಿಯೂ ಅದು ಎಷ್ಟು ಸತ್ಯಾಂಶದಿಂದ ಕೂಡಿದೆ ಅಲ್ಲವೇ... ತಾಯಿಯೇ ಮೊದಲ ಗುರು ಮನೆಯೇ ಮೊದಲ ಪಾಠಶಾಲೆ ಎಂಬ ನಾಣ್ಣುಡಿ ನಿಜಕ್ಕೂ ಸತ್ಯವಾದ ಮಾತು.
ಮಕ್ಕಳಿಗೆ ಚಿಕ್ಕ ವಯಸ್ಸಿನಿಂದ ಇತರರಿಗೆ, ಹಿರಿಯರಿಗೆ ಗೌರವ ಕೊಡುವುದನ್ನು ಕಲಿಸಿ ಯಾರಾದರೂ ಯಾವುದೇ ಚಿಕ್ಕ ಸಹಾಯ ಮಾಡಿದರೆ ಅವರಿಗೆ ಧನ್ಯವಾದಗಳು ಹೇಳುವುದನ್ನು ಕಲಿಸಿ. ಮೊಟ್ಟಮೊದಲಿಗೆ ಹಣದ ಮೌಲ್ಯ ಸಮಯದ ಮಹತ್ವವನ್ನು ತಿಳಿಸಿ ಕೊಡಿ, ಮಕ್ಕಳು ತಪ್ಪು ಮಾಡಿದಾಗ ತಂದೆ ತಾಯಿ ಇಬ್ಬರು ತಪ್ಪುಗಳನ್ನು ಸರಿಪಡಿಸಲು ಸಹಾಯ ಮಾಡಿ ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಅಂತ ತಿಳಿಸಿಕೊಡಿ ಕೆಲವು ಸಂದರ್ಭಗಳಲ್ಲಿ ಸ್ವತಂತ್ರವಾಗಿ ಸೂಕ್ತವಾದ ಸ್ವಂತ ನಿರ್ಧಾರ ತೆಗೆದುಕೊಳ್ಳುವಂತೆ ಮಾರ್ಗದರ್ಶನ ನೀಡಿ.
ಮಕ್ಕಳಿಗೆ ತಮ್ಮ ವೈಯಕ್ತಿಕ ಗೌಪ್ಯತೆ ಬಗ್ಗೆ ತಿಳಿಸುವುದು ತುಂಬಾನೇ ಮುಖ್ಯವಾದದ್ದು ಹಾಗೂ ಇತ್ತೀಚಿಗೆ ತುಂಬಾ ಅವಶ್ಯಕವಾದ ಆನ್ಲೈನ್ ಮಹತ್ವ ತಿಳಿಸಿಕೊಡಿ. ತಂದೆ ತಾಯಿ ಮಕ್ಕಳಿಗೆ ಹೊಸ ಉಡುಪುಗಳನ್ನು ತೆಗೆದುಕೊಳ್ಳುವಾಗ ತುಂಬಾ ಎಚ್ಚರಿಕೆ ಇಟ್ಟು ತೆಗೆದುಕೊಳ್ಳಿ, ಯಾರೋ ಅವರ ಮಕ್ಕಳಿಗೆ ತೋರಿಕೆಗೆ, ಪ್ರದರ್ಶನಕ್ಕೆ, ಹೆಗ್ಗಳಿಕೆಗೆ ತೆಗೆದುಕೊಂಡರೆಂದು ನೀವು ತೆಗೆದುಕೊಳ್ಳಬೇಡಿ.
ನಿಮ್ಮ ಮಕ್ಕಳು ಆ ಬಟ್ಟೆ ತೊಟ್ಟಾಗ ಯಾವುದೇ ಮುಜುಗರ ಆಗದಂತಹ ಕೀಳರಿಮೆ ಅನುಭವಿಸುವಂತಾಗದೇ, ಚರ್ಮ ಸ್ನೇಹಿಯಾದ ಅವರ ದೇಹ ಪ್ರಕೃತಿಗೆ ಹೊಂದಿಕೆಯಾಗುವ ರೀತಿ ಇರಲಿ. ನಮ್ಮ ಮಾತೃಭಾಷೆಗೆ ಮೊದಲು ಆದ್ಯತೆ ಕೊಡಿ ನಂತರ ಬೇರೆ ಭಾಷೆ ಕಲಿಸುವ ಒಲವು ಇರಲಿ ಸಮಾಜದಲ್ಲಿ ಒಬ್ಬ ಪ್ರತಿಷ್ಠಿತ ವ್ಯಕ್ತಿಯಾಗಿ ಯಾವುದೇ ಕಷ್ಟ ಬಂದರೂ ಜೀವನದಲ್ಲಿ ಬದುಕುವ ಕಲೆಯನ್ನು ರೂಢಿಸಿ ಇಲ್ಲದಿದ್ದಲ್ಲಿ ನಿಜವಾಗಿಯೂ ಇಂದು ಲತಾಳ ಮಗಳಂತೆ ನಿಮ್ಮ ಮಕ್ಕಳು ಸಹ ಯಾರ ಜೊತೆ ಮಾತಾಡದೆ, ಓದು ಬರಹದಲ್ಲಿ ಆಸಕ್ತಿ ಇಲ್ಲದಂತೆ ಕೋಣೆಯೊಳಗೆ ಒಬ್ಬರೇ ಇರುವುದರಲ್ಲಿ ಸಂದೇಹವೇ ಇಲ್ಲ.
ಆಧುನಿಕ ತಾಯಂದಿರ ನಾನು ಪಟ್ಟಂತೆ ನನ್ನ ಮಗಳು ಕಷ್ಟ ಪಡುವುದು ಬೇಡ ಎಂಬ ಸೂಕ್ತಿಯನ್ನು ಬದಲಾಯಿಸಿ ನಾನು ಕಲಿತಂತೆ ನನ್ನ ಮಗ ಅಥವಾ ಮಗಳಿಗೆ ಸಂಸ್ಕಾರ ಕಲಿಯಲಿ ಎಂಬುದಾಗಿ ಮಕ್ಕಳನ್ನು ಬೆಳೆಸಿ, ನಮ್ಮ ಭಾರತ ದೇಶದ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಉಳಿಸಿ.
ವೇದಾವತಿ ಕುಮಾರ್ ಹಳೇಬೀಡು



