ದೇವದುರ್ಗ: ಸೀಮಿತ ಆದಾಯದ ನಡುವೆಯೂ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ ದುಡಿದ ತಂದೆಯ ಪರಿಶ್ರಮಕ್ಕೆ ಪುತ್ರನ ಸಾಧನೆ ಸಾರ್ಥಕತೆ ತಂದುಕೊಟ್ಟಿದೆ. ಹಲವು ವರ್ಷಗಳಿಂದ ಪಂಚರ್ ಅಂಗಡಿ ನಡೆಸಿ ಕುಟುಂಬದ ಜೀವನ ಸಾಗಿಸುತ್ತಿರುವ ನರಸಿಂಗ್ ರಾವ್ ಸರೋದೆ ಅವರ ಪುತ್ರ ಅಕ್ಷಯ್ ಸರೋದೆ ಎಂಬಿಬಿಎಸ್ ವೈದ್ಯಕೀಯ ಕೋರ್ಸ್ಗೆ ಪ್ರವೇಶ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ಪಂಚರ್ ಅಂಗಡಿಯಿಂದ ಬರುವ ಆದಾಯವನ್ನೇ ಕುಟುಂಬ ನಿರ್ವಹಣೆ ಹಾಗೂ ಮಕ್ಕಳ ಶಿಕ್ಷಣಕ್ಕೆ ಆಧಾರವಾಗಿಸಿಕೊಂಡ ನರಸಿಂಗ್ ರಾವ್ ಸರೋದೆ ಅವರು, ಆರ್ಥಿಕ ಸಂಕಷ್ಟಗಳ ನಡುವೆಯೂ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗದಂತೆ ಶ್ರಮಿಸಿದ್ದಾರೆ. ಅವರ ಮಗಳು ಪ್ರಸ್ತುತ 9ನೇ ತರಗತಿಯಲ್ಲಿ ಓದುತ್ತಿದ್ದು, ಪುತ್ರ ಅಕ್ಷಯ್ ನಿರಂತರ ಅಧ್ಯಯನ ಹಾಗೂ ಪರಿಶ್ರಮದ ಫಲವಾಗಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾರೆ.
ಸಾಮಾನ್ಯ ಕುಟುಂಬದಲ್ಲಿ ಬೆಳೆದ ಅಕ್ಷಯ್ ಅವರ ಸಾಧನೆ ತಂದೆ-ತಾಯಿಯ ಹಲವು ವರ್ಷಗಳ ಶ್ರಮ ಹಾಗೂ ತ್ಯಾಗಕ್ಕೆ ದೊರೆತ ಪ್ರತಿಫಲವಾಗಿದೆ. ಮಗ ವೈದ್ಯನಾಗಬೇಕೆಂಬ ಕುಟುಂಬದ ಕನಸಿನ ಮೊದಲ ಹೆಜ್ಜೆ ಯಶಸ್ವಿಯಾಗಿದ್ದು, ಅಕ್ಷಯ್ ಅವರ ಸಾಧನೆ ಕುಟುಂಬದವರಲ್ಲಿ ಸಂತಸ ಮೂಡಿಸಿದೆ.
ಇದೇ ವೇಳೆ ವೈದ್ಯಕೀಯ ಶಿಕ್ಷಣದ ಮುಂದಿನ ಹಂತದಲ್ಲಿ ಕಾಲೇಜು ಶುಲ್ಕ, ಪುಸ್ತಕ, ವಸತಿ ಸೇರಿದಂತೆ ವಿವಿಧ ವೆಚ್ಚಗಳನ್ನು ಭರಿಸುವುದು ಕುಟುಂಬಕ್ಕೆ ಸವಾಲಾಗಿದೆ. ಪ್ರತಿಭಾವಂತ ವಿದ್ಯಾರ್ಥಿಯ ವೈದ್ಯಕೀಯ ಶಿಕ್ಷಣ ನಿರಾತಂಕವಾಗಿ ಮುಂದುವರಿಯಲು ಸಮಾಜದ ಸಹೃದಯರು ನೆರವಿನ ಹಸ್ತ ಚಾಚಿದರೆ ಅವರ ವೈದ್ಯನಾಗುವ ಕನಸಿಗೆ ಮತ್ತಷ್ಟು ಬಲ ಸಿಗಲಿದೆ ಎಂಬ ಆಶಯವನ್ನು ಸ್ನೇಹಿತರು ವ್ಯಕ್ತಪಡಿಸಿದರು.
ಅಕ್ಷಯ್ ಸರೋದೆ ಅವರ ಸಾಧನೆಯನ್ನು ಅಭಿನಂದಿಸಿ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು. ವೈದ್ಯಕೀಯ ಶಿಕ್ಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಭವಿಷ್ಯದಲ್ಲಿ ಉತ್ತಮ ವೈದ್ಯರಾಗಿ ಸಮಾಜಕ್ಕೆ ಸೇವೆ ಸಲ್ಲಿಸಲಿ ಎಂದು ಶುಭ ಹಾರೈಸಲಾಯಿತು.
ಈ ಸಂದರ್ಭದಲ್ಲಿ ಪ್ರವೀಣ್ ರೇವಣಿ, ಶರಣಬಸವ ರಾಮದುರ್ಗ, ಶಿಕ್ಷಕರಾದ ಕಲ್ಲಪ್ಪ ಹಾಗೂ ಮೈಲಾರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.



