ಮಾನ್ವಿ: ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಇಡೀ ಜೀವನವನ್ನೇ ತ್ಯಾಗ ಮಾಡುವ ತಂದೆ-ತಾಯಿಗಳನ್ನು ವೃದ್ಧಾಪ್ಯದಲ್ಲಿ ಆರೈಕೆ ಮಾಡುವ ಜವಾಬ್ದಾರಿಯಿಂದ ಕೆಲವರು ದೂರ ಸರಿಯುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಕುಟುಂಬಗಳಲ್ಲಿ ಹಿರಿಯರನ್ನು ಕಡೆಗಣಿಸುವ ಮನೋಭಾವ ಹೆಚ್ಚುತ್ತಿರುವ ಪರಿಣಾಮ ವೃದ್ಧಾಶ್ರಮಗಳ ಸಂಸ್ಕೃತಿಯೂ ಬೆಳೆಯುತ್ತಿದೆ ಎಂದು ನಿವೃತ್ತ ಮುಖ್ಯಗುರು ಹುಸೇನಪ್ಪ ಕುರ್ಡಿ ಹೇಳಿದರು.
ಪಟ್ಟಣದ ನೆರಳು ಹಿರಿಯರ ಮನೆಯಲ್ಲಿ ಮೇರಾ ಯುವ ಭಾರತ ರಾಯಚೂರು, ಯುವ ಕ್ರೀಡಾ ಸಚಿವಾಲಯ ಹಾಗೂ ವಂದೇ ಮಾತರಂ ಯುವ ಸಂಘ ಮದ್ಲಾಪುರ ಸಹಯೋಗದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಂದೆ-ತಾಯಿಗಳು ತಮ್ಮ ಮಕ್ಕಳ ಶಿಕ್ಷಣ, ಉದ್ಯೋಗ ಹಾಗೂ ಉತ್ತಮ ಬದುಕಿಗಾಗಿ ಅನೇಕ ಸಂಕಷ್ಟಗಳನ್ನು ಎದುರಿಸಿ ತ್ಯಾಗ ಮಾಡುತ್ತಾರೆ. ಅಂತಹ ಪೋಷಕರನ್ನು ವೃದ್ಧಾಪ್ಯದಲ್ಲಿ ಪ್ರೀತಿ, ಗೌರವ ಮತ್ತು ಕಾಳಜಿಯಿಂದ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಪೋಷಕರ ಸೇವೆಯನ್ನು ದೇವರ ಸೇವೆಯೆಂದು ಭಾವಿಸುವ ಮನೋಭಾವ ಯುವ ಪೀಳಿಗೆಯಲ್ಲಿ ಬೆಳೆಸಬೇಕಾಗಿದೆ ಎಂದರು.
ಹಿರಿಯರು ಕುಟುಂಬ ಮತ್ತು ಸಮಾಜದ ಅನುಭವದ ಸಂಪತ್ತಾಗಿದ್ದಾರೆ. ಅವರ ಜೀವನಾನುಭವ, ಸಲಹೆ ಹಾಗೂ ಮಾರ್ಗದರ್ಶನ ಯುವಜನರ ಬದುಕಿಗೆ ಸರಿಯಾದ ದಿಕ್ಕು ತೋರಬಲ್ಲದು. ಹಿರಿಯರ ಮಾರ್ಗದರ್ಶನದಿಂದ ದೂರವಾದಾಗ ಯುವಕರು ತಪ್ಪು ದಾರಿ ಹಿಡಿಯುವ ಸಾಧ್ಯತೆಗಳೂ ಇರುತ್ತವೆ. ಆದ್ದರಿಂದ ಹಿರಿಯರನ್ನು ಕುಟುಂಬದ ಅವಿಭಾಜ್ಯ ಅಂಗವಾಗಿ ಪರಿಗಣಿಸಿ ಅವರೊಂದಿಗೆ ಪ್ರೀತಿ ಮತ್ತು ಗೌರವದಿಂದ ನಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಪುರಸಭೆ ಸದಸ್ಯ ಎಚ್.ಬಿ.ಎಂ. ಹುಸೇನ್ ಭಾಷ, ವಂದೇ ಮಾತರಂ ಯುವ ಸಂಘ ಮದ್ಲಾಪುರ ಅಧ್ಯಕ್ಷ ಮಹಿಬೂಬ್ ಮದ್ಲಾಪುರ, ಸಮಾಜ ಸೇವಕ ಕೆ.ಎಂ. ಭಾಷ, ಕೆಎಂಡಿಎಸ್ ಸಂಘದ ಶಬ್ಬಿರ್, ಇಕ್ಬಾಲ್ ಖುರೇಶಿ, ಬಡವರ ಬಂಧು ಸಂಘದ ತಾಲ್ಲೂಕು ಅಧ್ಯಕ್ಷ ದೇವಣ್ಣ ಭಜಂತ್ರಿ, ನೆರಳು ಹಿರಿಯರ ಮನೆಯ ವ್ಯವಸ್ಥಾಪಕ ಚನ್ನಬಸವಸ್ವಾಮಿ ಹಾಗೂ ಹಿರಿಯರ ಮನೆಯ ಸದಸ್ಯರು ಉಪಸ್ಥಿತರಿದ್ದರು.



