ಸಿಂಧನೂರು, ಅ.2: ಸತ್ಯ ಮತ್ತು ಅಹಿಂಸೆಯನ್ನು ಬದುಕಿನ ಮೂಲಮಂತ್ರವನ್ನಾಗಿಸಿಕೊಂಡು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧೀಜಿಯವರ ಜೀವನ, ಚಿಂತನೆ ಮತ್ತು ಹೋರಾಟ ಪ್ರತಿಯೊಬ್ಬರಿಗೂ ಆದರ್ಶವಾಗಿದೆ ಎಂದು ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಬಸವರಾಜ ಬಾದರ್ಲಿ ಹೇಳಿದರು.

ನಗರದ ಪಿಎಂ ಶ್ರೀ ಆದರ್ಶ ವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗಾಂಧೀಜಿಯವರ ಸತ್ಯ, ಅಹಿಂಸೆ ಮತ್ತು ಶಾಂತಿಯ ಸಂದೇಶ ಜಗತ್ತಿನಾದ್ಯಂತ ಪ್ರಭಾವ ಬೀರಿದೆ. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಅವರ ಕರೆಗೆ ದೇಶದ ಜನತೆ ಒಗ್ಗೂಡಿ ಸ್ಪಂದಿಸುತ್ತಿದ್ದರು. ವಿದ್ಯಾರ್ಥಿಗಳು ಮಹನೀಯರ ಜೀವನ ಮೌಲ್ಯಗಳನ್ನು ಅರಿತು, ಉತ್ತಮ ಗುಣಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜ ಮತ್ತು ದೇಶದ ಪ್ರಗತಿಗೆ ಕೊಡುಗೆ ನೀಡಬೇಕು ಎಂದರು.

ಪ್ರಭಾರಿ ಮುಖ್ಯೋಪಾಧ್ಯಾಯ ವೀರೇಶ ಗೋನವಾರ ಮಾತನಾಡಿ, ಅಕ್ಟೋಬರ್ 2ನ್ನು ಜಗತ್ತಿನಾದ್ಯಂತ ಅಂತರರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ. ವಿದ್ಯಾರ್ಥಿಗಳು ಗಾಂಧೀಜಿಯವರ ಆತ್ಮಚರಿತ್ರೆ ಓದುವ ಮೂಲಕ ಅವರ ಜೀವನ, ಹೋರಾಟ ಮತ್ತು ಸಾಮಾಜಿಕ ಕಾಳಜಿಯನ್ನು ಅರಿತುಕೊಳ್ಳಬೇಕು. ಸ್ವಚ್ಛತೆಗೆ ಆದ್ಯತೆ ನೀಡುವುದರ ಜೊತೆಗೆ ಸಮಾಜದ ದುರ್ಬಲ ವರ್ಗಗಳ ಸೇವೆಯಲ್ಲಿಯೂ ಗಾಂಧೀಜಿ ತೊಡಗಿಸಿಕೊಂಡಿದ್ದರು ಎಂದು ತಿಳಿಸಿದರು.

ಕನ್ನಡ ಭಾಷಾ ಶಿಕ್ಷಕ ಭೀಮರೆಡ್ಡಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ನೀಡಿದ ಕೊಡುಗೆ ಹಾಗೂ ಸರಳತೆ ಮತ್ತು ಪ್ರಾಮಾಣಿಕತೆಯಿಂದ ಗುರುತಿಸಿಕೊಂಡ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನದ ವಿವಿಧ ಘಟನೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.

ಎಸ್‌ಡಿಎಂಸಿ ಸದಸ್ಯ ಮಲ್ಲಿಕಾರ್ಜುನ ಹಿರೇಮಠ ಮಾತನಾಡಿ, ಮಹನೀಯರ ಆದರ್ಶಗಳನ್ನು ಅನುಸರಿಸುವುದರೊಂದಿಗೆ ವಿದ್ಯಾರ್ಥಿಗಳು ಗುರುಗಳ ಬಗ್ಗೆ ಗೌರವ ಮತ್ತು ನಂಬಿಕೆ ಬೆಳೆಸಿಕೊಂಡು ಶಿಕ್ಷಣದಲ್ಲಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಗಣಿತ ಶಿಕ್ಷಕ ಸಾವನ್ ಕೆ. ಅವರು **‘ಗಾಂಧಿ ಅಲ್ಲದೆ ಇನ್ಯಾರು?’** ಎಂಬ ತಮ್ಮ ಸ್ವರಚಿತ ಗಜಲ್ ವಾಚಿಸಿದರು. ಎಂಟನೇ ತರಗತಿ ವಿದ್ಯಾರ್ಥಿನಿಯರಾದ ಶ್ರೀರಕ್ಷಾ ಹಾಗೂ ಭುವನೇಶ್ವರಿ ಗಾಂಧೀಜಿ ಮತ್ತು ಶಾಸ್ತ್ರಿ ಅವರ ಕುರಿತು ಮಾತನಾಡಿದರು. ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ‘ರಘುಪತಿ ರಾಘವ ರಾಜಾರಾಮ್’ ಭಜನೆಯನ್ನು ಸಾಮೂಹಿಕವಾಗಿ ಹಾಡಿದರು.

ಜಯಂತಿ ಅಂಗವಾಗಿ ಶಾಲಾ ಆವರಣ ಹಾಗೂ ಸುತ್ತಮುತ್ತ ಸ್ವಚ್ಛತಾ ಶ್ರಮದಾನ ನಡೆಸಲಾಯಿತು. ಎಸ್‌ಡಿಎಂಸಿ ಸದಸ್ಯ ಮೌಲಾಸಾಬ್, ಶಿಕ್ಷಕರಾದ ಕೆ. ಮಲ್ಲಪ್ಪ, ಬಸವರಾಜ ಆನೆಗುಂದಿ, ಮೌನೇಶಪ್ಪ, ಉಮೇಶ, ಜಡೇಶ, ಶಾರದಮ್ಮ, ಅಕ್ಕಮಹಾದೇವಿ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಪಾಲ್ಗೊಂಡಿದ್ದರು.