ಜಾಲಹಳ್ಳಿ, ಅ.2: ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ ಸತ್ಯ, ಅಹಿಂಸೆ, ಶಾಂತಿ ಮತ್ತು ಸಹಬಾಳ್ವೆಯ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಕೋಮುವಾದದ ವಿರುದ್ಧ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಪತ್ರಕರ್ತ ಗಿರಿಯಪ್ಪ ಪೂಜಾರಿ ಹೇಳಿದರು.

ಪಟ್ಟಣದ ಹಟ್ಟಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗಾಂಧೀಜಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಗಾಂಧೀಜಿಯವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ. ಜಾತಿ, ಧರ್ಮದ ಹೆಸರಿನಲ್ಲಿ ಜನರ ನಡುವೆ ಭಿನ್ನಾಭಿಪ್ರಾಯ ಮೂಡದಂತೆ ಪ್ರತಿಯೊಬ್ಬರೂ ಎಚ್ಚರ ವಹಿಸಿ, ಪರಸ್ಪರ ಗೌರವ ಮತ್ತು ಸಹಬಾಳ್ವೆಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಗಿರಿಯಪ್ಪ ಪೂಜಾರಿ ತಿಳಿಸಿದರು.

ಇದಕ್ಕೂ ಮುನ್ನ ವಕೀಲ ರಾಜಾವಾಸುದೇವ ನಾಯಕ, ಶ್ರೀಧರ ದೇಸಾಯಿ ಹಾಗೂ ದುರುಗಪ್ಪ ರಾಮಪಾಳಿ ಅವರು ಗಾಂಧೀಜಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಾಬಾ ಮೆಡಿಕಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಗಾಂಧೀಜಿಯವರ ಜೀವನ, ಸ್ವಾತಂತ್ರ್ಯ ಹೋರಾಟ ಹಾಗೂ ದೇಶದ ಸ್ವಾತಂತ್ರ್ಯ ಚಳವಳಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.

ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಂಗಣ್ಣ ಕೊಲ್ಕರ್ ಮಾತನಾಡಿ, ಗಾಂಧೀಜಿಯವರ ಆದರ್ಶಗಳನ್ನು ಕೇವಲ ಜಯಂತಿಗೆ ಸೀಮಿತಗೊಳಿಸದೆ ನಿತ್ಯ ಜೀವನದಲ್ಲಿ ಪಾಲಿಸಬೇಕು. ಹೋರಾಟ ಮತ್ತು ತ್ಯಾಗದ ಮೂಲಕ ಗಳಿಸಿದ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು ಹೋಗುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದರು.

ವಕೀಲ ರಾಜಾವಾಸುದೇವ ನಾಯಕ ಮಾತನಾಡಿ, ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ಜನರನ್ನು ಸಂಘಟಿಸುವ ಮೂಲಕ ಗಾಂಧೀಜಿ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಆಯಾಮ ನೀಡಿದರು. ಅವರ ವಿಚಾರಗಳು ಇಂದಿನ ಮತ್ತು ಮುಂದಿನ ಪೀಳಿಗೆಗೂ ಮಾರ್ಗದರ್ಶಕವಾಗಿವೆ ಎಂದು ಹೇಳಿದರು.

ಅಬ್ದುಲ್ ರಹಮಾನ್ ಖುರೇಶಿ ಅವರು ಗಾಂಧೀಜಿಯವರ ಜೀವನ ಚರಿತ್ರೆ, ಸ್ವಾತಂತ್ರ್ಯ ಹೋರಾಟ ಹಾಗೂ ದೇಶಕ್ಕಾಗಿ ಮಾಡಿದ ತ್ಯಾಗವನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಶ್ರೀಧರ ದೇಸಾಯಿ, ದುರುಗಪ್ಪ ರಾಮಪಾಳಿ, ರಂಗಣ್ಣ ಕೊಲ್ಕರ್, ಭೀಮಣ್ಣ, ಗುಮೇಧಾರ್ ಬುಡಪ್ಪ ಕಾವಲಿ, ಇಮಾಮ್ ಸಾಬ್ ಉದ್ದಾರ, ಹೈದರ್ ಸಾಬ್ ಮುಲ್ಲಾ, ರಂಗಪ್ಪ ಬಂಡಿ, ಶಿವು ಪಾಟೀಲ್ ಗಾಣದಾಳ್, ಅಯ್ಯನ್ ಗೌಡ ಮಾಸ್ತಿ, ಗ್ರಾಪಂ ಸದಸ್ಯರಾದ ಮಕ್ತುಮ್ ಪರಾಶಿ, ರಂಗಪ್ಪ ಕುದರಿ, ಕುಮಾರ್ ಚಪ್ಪಳಕಿ, ಸಲಬಣ್ಣ ಹಂಪರಗುಂದಿ, ಶಿವಪ್ಪ ನಾಯಕ ಗಾಂಜಿ, ಹುಸೇನ್ ನಾಸಿ, ಆಂಜನೇಯ ರಾಮಪಾಳಿ, ಮೌನೇಶ್ ಚಪ್ಪಳಕಿ, ರಾಜು ತವಗ, ಮಹೇಬೂಬ್ ಕುರುಕುಂದಿ, ವೆಂಕಟೇಶ್ ಕಸನದೊಡ್ಡಿ, ತಾತಪ್ಪ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.