ದೇವದುರ್ಗ, ಅ.2: ನಗರದ ಶಾಸಕರ ಕಾರ್ಯಾಲಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಶುಕ್ರವಾರ ಗೌರವಪೂರ್ವಕವಾಗಿ ಆಚರಿಸಲಾಯಿತು.

ಶಾಸಕಿ ಕರೆಮ್ಮ ಜಿ. ನಾಯಕ ಅವರು ಗಾಂಧೀಜಿ ಹಾಗೂ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು. ಬಳಿಕ ಉಭಯ ಮಹನೀಯರ ಜೀವನ, ಸ್ವಾತಂತ್ರ್ಯ ಹೋರಾಟ, ದೇಶಸೇವೆ ಹಾಗೂ ಅವರು ಪ್ರತಿಪಾದಿಸಿದ ಮೌಲ್ಯಗಳನ್ನು ಸ್ಮರಿಸಲಾಯಿತು.

ಗಾಂಧೀಜಿಯವರ ಸತ್ಯ, ಅಹಿಂಸೆ ಮತ್ತು ಶಾಂತಿಯ ಸಂದೇಶ ಹಾಗೂ ಶಾಸ್ತ್ರಿಯವರ ಸರಳತೆ, ಪ್ರಾಮಾಣಿಕತೆ ಮತ್ತು ದೇಶಪ್ರೇಮದ ಆದರ್ಶಗಳು ಇಂದಿನ ಪೀಳಿಗೆಗೆ ಮಾರ್ಗದರ್ಶಕವಾಗಿವೆ ಎಂದು ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು.

ಈ ಸಂದರ್ಭದಲ್ಲಿ ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಶರಣಪ್ಪ ಬಳೆ, ಅಧ್ಯಕ್ಷ ಬಸನಗೌಡ ದೇಸಾಯಿ ವಕೀಲರು, ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಮಯೂರ್ ಸ್ವಾಮಿ, ಯುವ ಘಟಕದ ಅಧ್ಯಕ್ಷ ರಮೇಶ ರಾಮನಾಳ, ನಗರ ಘಟಕದ ಅಧ್ಯಕ್ಷ ಭೀಮಣ್ಣ ಗೋಸಲ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮಾಹೇಬೂಬ ಬುವಾಜಿ, ಹನುಮಂತರಾಯ ಚಿಂತಲಕುಂಟ, ಮುಖಂಡರಾದ ಈಶಪ್ಪ ಗೌಡ, ಸಮೀನ ಬೇಗಂ, ರವಿ ನಾಯಕ, ಅಶೋಕ್ ಓಣಿ, ಗೌರಿ ಗೋಪಾಲಕೃಷ್ಣ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.