ಕರೇಗುಡ್ಡ, ಅ.2: ಶ್ರೀ ಮಹಾಂತೇಶ್ವರ ಸಂಸ್ಥಾನ ಮಠದ ಶ್ರೀ ಆದಿಶಕ್ತಿ ಜಗನ್ಮಾತೆ ಅಂಬಾದೇವಿಯ ಸನ್ನಿಧಿಯಲ್ಲಿ ಅನಂತ ಹುಣ್ಣಿಮೆಯ ನಂತರದ ಶುಕ್ರವಾರದಂದು ಸಂಪ್ರದಾಯಬದ್ಧವಾಗಿ ನಡೆಯುವ ವಿಶೇಷ ನೈವೇದ್ಯ ಸಮರ್ಪಣಾ ಮಹೋತ್ಸವವನ್ನು ಭಕ್ತಿ-ಶ್ರದ್ಧೆಯಿಂದ ಆಚರಿಸಲಾಯಿತು.

ಪೂರ್ವಜರು ಹಾಗೂ ಹಿರಿಯರು ಅನುಸರಿಸಿಕೊಂಡು ಬಂದಿರುವ ಧಾರ್ಮಿಕ ಸಂಪ್ರದಾಯದಂತೆ ಶ್ರೀ ಅಂಬಾದೇವಿಗೆ ತೊಗರಿಬೇಳೆ ಹೋಳಿಗೆಯನ್ನು ವಿಶೇಷ ನೈವೇದ್ಯವಾಗಿ ಸಮರ್ಪಿಸಲಾಯಿತು. ಪರಮ ಪೂಜ್ಯ ಶ್ರೀ ಮ.ಘ.ಚ. ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಶಾಸ್ತ್ರೋಕ್ತ ಪೂಜೆ ಹಾಗೂ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ನೆರವೇರಿದವು.

ಈ ಸಂದರ್ಭದಲ್ಲಿ ಭಕ್ತರು ಸಕುಟುಂಬ ಸಮೇತರಾಗಿ ಆಗಮಿಸಿ ಶ್ರೀ ಆದಿಶಕ್ತಿ ಜಗನ್ಮಾತೆ ಅಂಬಾದೇವಿ ಹಾಗೂ ಗುರು ಮಹಾಂತೇಶ್ವರರ ದರ್ಶನ ಪಡೆದು, ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ಸಮಸ್ತ ಲೋಕಕ್ಕೆ ಶಾಂತಿ, ಸೌಭಾಗ್ಯ, ಆರೋಗ್ಯ ಮತ್ತು ಸಮೃದ್ಧಿ ದೊರೆಯಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.