ಸಿಂಧನೂರು: ತಾಲೂಕಿನ ಗೊರೆಬಾಳ ಗ್ರಾಮದ ನಿವಾಸಿ ಪರಶುರಾಮ ಅವರು 2026ನೇ ಸಾಲಿನ ದಸರಾ ಕ್ರೀಡಾಕೂಟದಲ್ಲಿ ಜಿಲ್ಲಾ ಹಾಗೂ ವಿಭಾಗ ಮಟ್ಟದ 95 ಕೆ.ಜಿ. ಭಾರ ಎತ್ತುವಿಕೆ (ವೇಟ್ಲಿಫ್ಟಿಂಗ್) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು, ಮೈಸೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಬಡತನದ ನಡುವೆಯೂ ಕಠಿಣ ಪರಿಶ್ರಮದಿಂದ ಎಂ.ಎ. ಪದವಿ ಪಡೆದಿರುವ ಪರಶುರಾಮ ಅವರು ಶಿಕ್ಷಣದ ಜತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ಗಮನಾರ್ಹ ಸಾಧನೆ ಮಾಡಿದ್ದಾರೆ. ಸೀಮಿತ ಸೌಲಭ್ಯಗಳ ನಡುವೆಯೂ ತಮ್ಮ ಪರಿಶ್ರಮ, ಆತ್ಮವಿಶ್ವಾಸ ಹಾಗೂ ಕ್ರೀಡಾ ಪ್ರತಿಭೆಯ ಮೂಲಕ ಜಿಲ್ಲಾ ಮತ್ತು ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿರುವುದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಬೆಳೆದು ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪರಶುರಾಮ ಅವರು ಯುವಜನರಿಗೆ ಮಾದರಿಯಾಗಿದ್ದಾರೆ. ಅವರ ಸಾಧನೆಗೆ ಗ್ರಾಮದ ಸಾರ್ವಜನಿಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸ್ನೇಹಿತರು ಹಾಗೂ ಗುರು-ಹಿರಿಯರು ಹರ್ಷ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ದಸರಾ ಕ್ರೀಡಾಕೂಟದಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದ್ದಾರೆ.



