ಗಬ್ಬೂರು, ಅ.3: ಶಿಕ್ಷಣದ ಗುಣಮಟ್ಟವನ್ನು ಕೇವಲ ವಿದ್ಯಾರ್ಥಿಗಳು ಪಡೆಯುವ ಅಂಕಗಳಿಂದ ಅಳೆಯದೆ, ಅವರಲ್ಲಿ ಸೃಜನಶೀಲತೆ, ನೈತಿಕ ಮೌಲ್ಯಗಳು, ಜೀವನ ಕೌಶಲ್ಯ ಹಾಗೂ ಆತ್ಮವಿಶ್ವಾಸ ಬೆಳೆಸುವ ಮೂಲಕ ಸರ್ವಾಂಗೀಣ ವ್ಯಕ್ತಿತ್ವ ರೂಪಿಸುವುದು ಶಿಕ್ಷಕರ ಪ್ರಮುಖ ಜವಾಬ್ದಾರಿಯಾಗಿದೆ ಎಂದು ನಳಂದ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಹಾಗೂ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ ಸದಸ್ಯ ಡಾ. ಸಿದ್ದಪ್ಪ ಜೇಗರ್ ಹೇಳಿದರು.
ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಹೇರೂರು ಚಂದ್ರಾಯಗೌಡ ಮಲ್ಹಾರ ಸಿದ್ದಪ್ಪಗೌಡ ಕರೆಡ್ಡಿ ಶಿಕ್ಷಣ ಮಹಾವಿದ್ಯಾಲಯ, ರಾಯಚೂರು ವತಿಯಿಂದ ದೇವದುರ್ಗ ತಾಲೂಕಿನ ಗಬ್ಬೂರಿನ ಎಸ್ಎಲ್ಡಿ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿರುವ ಪೌರತ್ವ ತರಬೇತಿ ಶಿಬಿರದ ಎರಡನೇ ದಿನ ಶನಿವಾರ ನಡೆದ ‘ಗುಣಮಟ್ಟದ ಶಿಕ್ಷಣ ಸುಧಾರಣೆಯಲ್ಲಿ ಶಿಕ್ಷಕರ ಪಾತ್ರ’ ವಿಷಯದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ದೇಶದ ಭವಿಷ್ಯ ತರಗತಿ ಕೋಣೆಯಲ್ಲಿ ರೂಪುಗೊಳ್ಳುತ್ತದೆ. ಆ ಭವಿಷ್ಯಕ್ಕೆ ಸೂಕ್ತ ದಿಕ್ಕು ನೀಡುವ ಹೊಣೆ ಶಿಕ್ಷಕರ ಮೇಲಿದೆ. ಶಿಕ್ಷಣವು ಅಂಕಪಟ್ಟಿಗೆ ಸೀಮಿತವಾಗದೆ ಮಕ್ಕಳ ಬೌದ್ಧಿಕ, ಸಾಮಾಜಿಕ, ಭಾವನಾತ್ಮಕ ಹಾಗೂ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗಬೇಕು. ಕಲಿಕೆಯಲ್ಲಿ, ವಿಶೇಷವಾಗಿ ಇಂಗ್ಲಿಷ್ ಭಾಷೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು” ಎಂದು ತಿಳಿಸಿದರು.
ಶಿಬಿರದ ಸಂಯೋಜನಾಧಿಕಾರಿ ಡಾ. ಸಿದ್ದರಾಮಯ್ಯ ಹಿರೇಮಠ ಮಾತನಾಡಿ, ವಿದ್ಯಾರ್ಥಿಗಳನ್ನು ತರಗತಿಯಲ್ಲಿ ಕ್ರಿಯಾಶೀಲವಾಗಿಡಲು ಚಟುವಟಿಕೆ ಆಧಾರಿತ ಬೋಧನೆಗೆ ಆದ್ಯತೆ ನೀಡಬೇಕು. ಕಠಿಣ ವಿಷಯಗಳನ್ನು ಆಟ ಹಾಗೂ ಸರಳ ಚಟುವಟಿಕೆಗಳ ಮೂಲಕ ಅರ್ಥೈಸುವುದರಿಂದ ಕಲಿಕೆ ಪರಿಣಾಮಕಾರಿಯಾಗುತ್ತದೆ. ಮಕ್ಕಳ ಮಾನಸಿಕ ಒತ್ತಡವನ್ನು ಗುರುತಿಸಿ ನಿವಾರಿಸುವಲ್ಲಿಯೂ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಉಪನ್ಯಾಸಕ ವೀರನಗೌಡ ಮಾತನಾಡಿ, ಬದಲಾಗುತ್ತಿರುವ ಡಿಜಿಟಲ್ ಯುಗಕ್ಕೆ ಅನುಗುಣವಾಗಿ ಶಿಕ್ಷಕರು ಹೊಸ ತಂತ್ರಜ್ಞಾನ ಮತ್ತು ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ನಿರಂತರ ಅಧ್ಯಯನದ ಮೂಲಕ ಜ್ಞಾನ ಹಾಗೂ ಬೋಧನಾ ಕೌಶಲ್ಯವನ್ನು ವೃದ್ಧಿಸಿಕೊಂಡಾಗ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಶಿಕ್ಷಣ ನೀಡಲು ಸಾಧ್ಯ ಎಂದರು.
ಹಿರಿಯ ಉಪನ್ಯಾಸಕ ಹೇಮರೆಡ್ಡಿ ಪಾಟೀಲ್ ಮಾತನಾಡಿ, ಶಿಕ್ಷಕರು ಕೇವಲ ಪಠ್ಯ ವಿಷಯವನ್ನು ಬೋಧಿಸುವವರಾಗದೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರ್ಗದರ್ಶನ ನೀಡುವವರಾಗಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಪ್ರೀತಿಯಿಂದ ಪ್ರೋತ್ಸಾಹಿಸಿ ಆತ್ಮವಿಶ್ವಾಸ ಬೆಳೆಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಮಂಜುನಾಥ ಪಾಟೀಲ ವಟಗಲ್ ಮಾತನಾಡಿ, ಗುಣಮಟ್ಟದ ಶಿಕ್ಷಣಕ್ಕೆ ಕಟ್ಟಡ ಮತ್ತು ತಂತ್ರಜ್ಞಾನ ಮಾತ್ರ ಸಾಕಾಗುವುದಿಲ್ಲ. ಸಮರ್ಪಣಾಭಾವ, ಜವಾಬ್ದಾರಿ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿ ಹೊಂದಿರುವ ಶಿಕ್ಷಕರಿಂದ ಶಿಕ್ಷಣದ ನಿಜವಾದ ಗುಣಮಟ್ಟ ಹೆಚ್ಚಿಸಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಶಿಬಿರದ ಕಾರ್ಯಕ್ರಮಾಧಿಕಾರಿ ಶಶಿಕುಮಾರ, ಉಪನ್ಯಾಸಕರಾದ ಉತ್ತಪ್ಪ ಕೆ., ಹಂಪಮ್ಮ ಮಾಧುರಿ, ಈರಪ್ಪ ಸರ್ಜಾಪುರ ಹಾಗೂ ಪೌರತ್ವ ತರಬೇತಿ ಶಿಬಿರದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.



