ಮಾನ್ವಿ: ರಾಯಚೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ 2026–27ನೇ ಸಾಲಿನ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮಾನ್ವಿ ಪಟ್ಟಣದ ಲೋಯೋಲ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ತೋರಿ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಲೋಯೋಲ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಅಭಿನಂದಿಸಿ ಮಾತನಾಡಿದ ಶಾಲೆಯ ನಿರ್ದೇಶಕ ಫಾ. ಸಿರಿಲ್ ರಾಜ್ ಎಸ್.ಜೆ., ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಸತತವಾಗಿ 4x100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಬಾರಿ 8 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಹೇಳಿದರು.
17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ 10ನೇ ತರಗತಿಯ ಜಾದವ್ ಮಂಡಲ್ 100 ಮೀಟರ್, 200 ಮೀಟರ್ ಹಾಗೂ 4x100 ಮೀಟರ್ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಪೃಥ್ವಿ ಪವಾರ್ 200 ಮೀಟರ್ ಹಾಗೂ 100 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ, 110 ಮೀಟರ್ ಹರ್ಡಲ್ಸ್ ಮತ್ತು 4x100 ಮೀಟರ್ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. 9ನೇ ತರಗತಿಯ ರಾಕೇಶ್ 4x100 ಮೀಟರ್ ರಿಲೇಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ 8ನೇ ತರಗತಿಯ ಟಿ. ವೆಂಕಟೇಶ್ ಶಾಟ್ಪುಟ್ನಲ್ಲಿ ತೃತೀಯ ಸ್ಥಾನ, 80 ಮೀಟರ್ ಹರ್ಡಲ್ಸ್ ಹಾಗೂ 4x100 ಮೀಟರ್ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಹರ್ಷವರ್ಧನ್ 4x100 ಮೀಟರ್ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಕೃಷ್ಣ 400 ಮೀಟರ್ ಹರ್ಡಲ್ಸ್ನಲ್ಲಿ ಪ್ರಥಮ, 110 ಮೀಟರ್ ಹರ್ಡಲ್ಸ್ನಲ್ಲಿ ದ್ವಿತೀಯ ಹಾಗೂ 4x100 ಮೀಟರ್ ರಿಲೇಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
7ನೇ ತರಗತಿಯ ಅಭಿ ಸಮರ್ಥ 4x100 ಮೀಟರ್ ರಿಲೇಯಲ್ಲಿ ಪ್ರಥಮ ಹಾಗೂ 100 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಕೆ. ಸತ್ಯ ನಾಗ ಸಾಯಿ ಕೃಷ್ಣ 4x100 ಮೀಟರ್ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಲೋಯೋಲ ಸಂಸ್ಥೆಗಳ ಮುಖ್ಯಸ್ಥೆ ಸಿಸ್ಟರ್ ಜೂಲಿಯಟ್, ಉಪಮುಖ್ಯಸ್ಥ ಡೇವಿಡ್ ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕ ಲತೀಫ್ ಸಾಬ್, ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.



