ಮಾನ್ವಿ: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರಿನ ವಿಸ್ತರಣಾ ನಿರ್ದೇಶನಾಲಯವು ಕೃಷಿ ತಂತ್ರಜ್ಞಾನಗಳನ್ನು ರೈತರ ಹೊಲಗಳಿಗೆ ತಲುಪಿಸುವುದರ ಜೊತೆಗೆ, ರೈತರ ಆದಾಯ ಹೆಚ್ಚಿಸಿ ಕೃಷಿಯನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಹಲವು ವಿನೂತನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ.

ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿಯಾಗುವ ಕೃಷಿ ತಂತ್ರಜ್ಞಾನ ಮತ್ತು ವೈಜ್ಞಾನಿಕ ಮಾಹಿತಿಯನ್ನು ವಿವಿ ಆವರಣಕ್ಕೆ ಸೀಮಿತಗೊಳಿಸದೆ ನೇರವಾಗಿ ರೈತರಿಗೆ ತಲುಪಿಸುವ ಉದ್ದೇಶದಿಂದ ಕುಲಪತಿ ಡಾ. ಎಂ. ಹನುಮಂತಪ್ಪ ಅವರ ಸಹಕಾರ ಹಾಗೂ ವಿಸ್ತರಣಾ ನಿರ್ದೇಶಕ ಡಾ. ಎ.ಆರ್. ಕುರುಬರ ನೇತೃತ್ವದಲ್ಲಿ ‘ನಮ್ಮ ಹೆಮ್ಮೆಯ ರೈತ’, ‘ರೈತ ಸಂತೆ’, ‘ರೈತರೊಂದಿಗೆ ಒಂದು ದಿನ’ ಸೇರಿದಂತೆ ವಿವಿಧ ರೈತಪರ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

ರೈತರ ಯಶೋಗಾಥೆಗಳನ್ನು ಇತರ ರೈತರಿಗೆ ಪರಿಚಯಿಸುವುದು, ಕೃಷಿ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಕಲ್ಪಿಸುವುದು, ರೈತರ ನೈಜ ಸಮಸ್ಯೆಗಳನ್ನು ಅರಿತು ಪರಿಹಾರ ಮಾರ್ಗಗಳನ್ನು ಸೂಚಿಸುವುದು ಹಾಗೂ ಹೊಸ ಕೃಷಿ ತಂತ್ರಜ್ಞಾನಗಳ ಬಳಕೆಗೆ ಪ್ರೋತ್ಸಾಹಿಸುವುದು ಕಾರ್ಯಕ್ರಮಗಳ ಪ್ರಮುಖ ಉದ್ದೇಶವಾಗಿದೆ.

‘ನಮ್ಮ ಹೆಮ್ಮೆಯ ರೈತ’ ಕಾರ್ಯಕ್ರಮದಡಿ 2023-24ರಿಂದ ವಿಸ್ತರಣಾ ನಿರ್ದೇಶನಾಲಯದ ಅಧೀನದಲ್ಲಿರುವ 7 ಕೃಷಿ ವಿಜ್ಞಾನ ಕೇಂದ್ರಗಳು ಹಾಗೂ 6 ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರಗಳು ಪ್ರತಿ ತಿಂಗಳು ಒಬ್ಬ ಪ್ರಗತಿಪರ ರೈತನನ್ನು ಆಯ್ಕೆ ಮಾಡುತ್ತಿವೆ. ಅವರ ಕೃಷಿ ಚಟುವಟಿಕೆ, ಅಳವಡಿಸಿಕೊಂಡ ತಂತ್ರಜ್ಞಾನ, ಬೆಳೆ ಪದ್ಧತಿ, ಉತ್ಪಾದನೆ, ಆದಾಯ, ಮೌಲ್ಯವರ್ಧನೆ ಹಾಗೂ ಉಪಕಸುಬುಗಳ ಕುರಿತು ಮಾಹಿತಿ ಸಂಗ್ರಹಿಸಿ ಪೋಸ್ಟರ್ ರೂಪದಲ್ಲಿ ಪ್ರದರ್ಶಿಸಲಾಗುತ್ತಿದೆ.

2025ರಿಂದ ‘ನಮ್ಮ ಹೆಮ್ಮೆಯ ರೈತ ಮಹಿಳೆ’ ವಿಭಾಗಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಇದುವರೆಗೆ 210ಕ್ಕೂ ಹೆಚ್ಚು ರೈತರನ್ನು ಕಾರ್ಯಕ್ರಮದಡಿ ಗುರುತಿಸಲಾಗಿದೆ ಎಂದು ವಿಸ್ತರಣಾ ನಿರ್ದೇಶಕ ಡಾ. ಎ.ಆರ್. ಕುರುಬರ ತಿಳಿಸಿದ್ದಾರೆ.

ರೈತರು ಬೆಳೆದ ಉತ್ಪನ್ನಗಳಿಗೆ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ಗ್ರಾಹಕರ ಸಂಪರ್ಕ ಕಲ್ಪಿಸಲು ವಿಶ್ವವಿದ್ಯಾಲಯದ ಎರಡನೇ ಗೇಟ್ ಬಳಿ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಬೆಳಿಗ್ಗೆ 6ರಿಂದ 11 ಗಂಟೆಯವರೆಗೆ ‘ರೈತ ಸಂತೆ’ ಆಯೋಜಿಸಲಾಗುತ್ತಿದೆ.

ತರಕಾರಿ, ಹಣ್ಣು, ಸೊಪ್ಪು, ಹೂವು, ಸಿರಿಧಾನ್ಯ, ಬೇಳೆಕಾಳು ಹಾಗೂ ಸಾವಯವ ಅಕ್ಕಿ ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳನ್ನು ಇಲ್ಲಿ ನೇರವಾಗಿ ಮಾರಾಟ ಮಾಡಲು ಅವಕಾಶ ನೀಡಲಾಗುತ್ತಿದೆ. ಸ್ವಸಹಾಯ ಸಂಘಗಳ ಮಹಿಳೆಯರು ತಯಾರಿಸುವ ಕ್ಯಾರೆಟ್, ಜೋಳ, ರಾಗಿ ಮತ್ತು ಪಾಲಕ್ ಉತ್ಪನ್ನಗಳು, ಹಪ್ಪಳ, ನುಗ್ಗೆ ಸೊಪ್ಪಿನ ಪುಡಿ, ಜೋಳ, ಸಜ್ಜೆ ಹಾಗೂ ರಾಗಿ ರೊಟ್ಟಿ, ಉಪ್ಪಿನಕಾಯಿ, ಕರಿಬೇವಿನ ಚಟ್ನಿ, ಬೆಳ್ಳುಳ್ಳಿ ಚಟ್ನಿ ಮತ್ತು ಶೇಂಗಾ ಚಟ್ನಿ ಸೇರಿದಂತೆ ಮೌಲ್ಯವರ್ಧಿತ ಉತ್ಪನ್ನಗಳಿಗೂ ಮಾರುಕಟ್ಟೆ ಒದಗಿಸಲಾಗುತ್ತಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹಾಗೂ ಹಿರಿಯ ವಿಜ್ಞಾನಿ ಡಾ. ತಿಮ್ಮಣ್ಣ ತಿಳಿಸಿದ್ದಾರೆ.

ರೈತರಿಗೆ ತ್ವರಿತವಾಗಿ ವೈಜ್ಞಾನಿಕ ಮಾಹಿತಿ ತಲುಪಿಸಲು ‘ಕಲ್ಯಾಣ ಕೃಷಿ ದರ್ಶನ’ ಎಂಬ ಡಿಜಿಟಲ್ ಸಾಮಾಜಿಕ ಜಾಲತಾಣ ವೇದಿಕೆಯನ್ನು ಆರಂಭಿಸಲಾಗಿದೆ. ಫೇಸ್‌ಬುಕ್, ಯೂಟ್ಯೂಬ್ ಹಾಗೂ ಇನ್‌ಸ್ಟಾಗ್ರಾಂ ಮೂಲಕ ವಿಡಿಯೊ, ಚಿತ್ರ ಮತ್ತು ಸರಳ ಮಾಹಿತಿಯ ರೂಪದಲ್ಲಿ ಕೃಷಿ ಸಲಹೆಗಳನ್ನು ನೀಡಲಾಗುತ್ತಿದೆ.

ಬೆಳೆ ನಿರ್ವಹಣೆ, ಕೀಟ ಮತ್ತು ರೋಗ ನಿಯಂತ್ರಣ, ಪೋಷಕಾಂಶ ನಿರ್ವಹಣೆ, ತೋಟಗಾರಿಕೆ, ಸುಸ್ಥಿರ ಕೃಷಿ, ಕೊಯ್ಲೋತ್ತರ ತಂತ್ರಜ್ಞಾನ ಹಾಗೂ ಕೃಷಿ ಉದ್ಯಮಶೀಲತೆ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿಜ್ಞಾನಿಗಳು ಮತ್ತು ವಿಷಯ ತಜ್ಞರಿಂದ ಮಾಹಿತಿ ನೀಡಲಾಗುತ್ತಿದೆ ಎಂದು ಬೇಸಾಯ ಶಾಸ್ತ್ರ ವಿಜ್ಞಾನಿ ಡಾ. ಮಲ್ಲಾರೆಡ್ಡಿ ತಿಳಿಸಿದ್ದಾರೆ.

ರಾಯಚೂರು ಕೃಷಿ ವಿವಿ ಆವರಣದ 2.5 ಎಕರೆ ಪ್ರದೇಶದಲ್ಲಿ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಮಾದರಿ ಸಮಗ್ರ ಕೃಷಿ ಪದ್ಧತಿ ಘಟಕ ಸ್ಥಾಪಿಸಲಾಗುತ್ತಿದೆ. ಬೆಳೆ ಉತ್ಪಾದನೆಯೊಂದಿಗೆ ವಿವಿಧ ಕೃಷಿ ಉಪಕಸುಬುಗಳನ್ನು ಸಮನ್ವಯಗೊಳಿಸಿ ರೈತರಿಗೆ ಪ್ರಾಯೋಗಿಕ ಮಾದರಿಯನ್ನು ಪರಿಚಯಿಸುವ ಉದ್ದೇಶ ಹೊಂದಲಾಗಿದೆ.

ಮುಂದಿನ ದಿನಗಳಲ್ಲಿ ಈ ಘಟಕವನ್ನು ಕೃಷಿ ಪ್ರವಾಸೋದ್ಯಮ (ಅಗ್ರೋ ಟೂರಿಸಂ) ಕೇಂದ್ರವಾಗಿಯೂ ಅಭಿವೃದ್ಧಿಪಡಿಸುವ ಉದ್ದೇಶವಿದೆ ಎಂದು ತೋಟಗಾರಿಕೆ ವಿಜ್ಞಾನಿ ಡಾ. ಸನ್ಮತಿ ನಾಯಕ ತಿಳಿಸಿದ್ದಾರೆ.

ವಿಶ್ವವಿದ್ಯಾಲಯದ ಅಧೀನದ ಕೃಷಿ ವಿಜ್ಞಾನ ಕೇಂದ್ರಗಳು ತಮ್ಮ ಕಾರ್ಯಚಟುವಟಿಕೆಗಳಿಗಾಗಿ ರಾಷ್ಟ್ರೀಯ ಮಟ್ಟದಲ್ಲಿಯೂ ಗುರುತಿಸಿಕೊಂಡಿವೆ. ರಾಯಚೂರು ಕೃಷಿ ವಿಜ್ಞಾನ ಕೇಂದ್ರವು 2005-06ನೇ ಸಾಲಿನ ರಾಷ್ಟ್ರೀಯ ಮಟ್ಟದ ಅತ್ಯುತ್ತಮ ಕೃಷಿ ವಿಜ್ಞಾನ ಕೇಂದ್ರ ಪ್ರಶಸ್ತಿ, ಬೀದರ್ ಕೆವಿಕೆ 2014-15ನೇ ಸಾಲಿನ ದಕ್ಷಿಣ ವಲಯದ ಅತ್ಯುತ್ತಮ ಕೃಷಿ ವಿಜ್ಞಾನ ಕೇಂದ್ರ ಪ್ರಶಸ್ತಿ ಹಾಗೂ ಕಲಬುರಗಿ ಕೃಷಿ ವಿಜ್ಞಾನ ಕೇಂದ್ರವು 2020ರಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಕೃಷಿ ವಿಜ್ಞಾನ ಪ್ರೋತ್ಸಾಹನ್ ಪುರಸ್ಕಾರ ಪಡೆದಿವೆ.

ರಾಯಚೂರು ಕೆವಿಕೆಗೆ ದೊರೆತ ಪ್ರಶಸ್ತಿ ಮೊತ್ತವನ್ನು ಬಳಸಿಕೊಂಡು ಕಲ್ಯಾಣ ಕರ್ನಾಟಕ ಭಾಗದ ಸಾಧಕ ರೈತರನ್ನು ಗುರುತಿಸಿ, ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆಯಲ್ಲಿ ‘ಕೃಷಿ ರತ್ನ’ ಬಿರುದಿನೊಂದಿಗೆ ಚಿನ್ನದ ಪದಕ ನೀಡಿ ಗೌರವಿಸಲಾಗುತ್ತಿದೆ.

ಕಲ್ಯಾಣ ಕರ್ನಾಟಕ ಭಾಗದ ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನ, ವೈಜ್ಞಾನಿಕ ಸಲಹೆ, ನೇರ ಮಾರುಕಟ್ಟೆ ಹಾಗೂ ಕೃಷಿ ಉದ್ಯಮಶೀಲತೆಯ ಅವಕಾಶಗಳನ್ನು ಪರಿಚಯಿಸುವ ಮೂಲಕ ಕೃಷಿಯನ್ನು ಹೆಚ್ಚು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶನಾಲಯ ಕಾರ್ಯನಿರ್ವಹಿಸುತ್ತಿದೆ.