ಸಿಂಧನೂರು: ತಾಲೂಕಿನ ಇ.ಜೆ. ಹೊಸಳ್ಳಿ ಕ್ಯಾಂಪ್ ಶಾಲೆಯ ಶಿಕ್ಷಕ ಛತ್ರಪ್ಪ ಅವರು ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದಿಂದ ನೀಡಲಾಗುವ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲೆಯ ಶಿಕ್ಷಕ ವೃಂದ ಅವರನ್ನು ಸನ್ಮಾನಿಸಿ ಗೌರವಿಸಿತು.
ವಿದ್ಯಾರ್ಥಿಗಳಿಗೆ ಪಠ್ಯ ಶಿಕ್ಷಣದ ಜೊತೆಗೆ ಪರಿಸರ ಪ್ರಜ್ಞೆ, ಕ್ರೀಡೆ ಹಾಗೂ ವಿವಿಧ ವಿಷಯಗಳನ್ನು ಸರಳವಾಗಿ ಮನಮುಟ್ಟುವ ರೀತಿಯಲ್ಲಿ ಬೋಧಿಸುವ ಮೂಲಕ ಛತ್ರಪ್ಪ ಅವರು ವಿದ್ಯಾರ್ಥಿಗಳು ಮತ್ತು ಪೋಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶಿಕ್ಷಕರೊಂದಿಗೆ ಉತ್ತಮ ಒಡನಾಟ ಹೊಂದಿರುವ ಅವರು ಪರಿಸರ ಸಂರಕ್ಷಣಾ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಈ ಹಿಂದೆ ಕೆ. ಹೊಸಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ವನಸಿರಿ ಫೌಂಡೇಷನ್ ಸಹಯೋಗದಲ್ಲಿ ಶಾಲಾ ಆವರಣದಲ್ಲಿ ನೆಡಲಾಗಿದ್ದ ಗಿಡಗಳ ಪಾಲನೆ-ಪೋಷಣೆಗೆ ವಿಶೇಷ ಕಾಳಜಿ ವಹಿಸಿದ್ದರು. ಅಂದು ನೆಟ್ಟ ಗಿಡಗಳು ಇಂದು ಹೆಮ್ಮರಗಳಾಗಿ ಬೆಳೆದು ಶಾಲಾ ಆವರಣದ ಸೌಂದರ್ಯ ಹೆಚ್ಚಿಸಿವೆ ಎಂದು ವನಸಿರಿ ಫೌಂಡೇಷನ್ ಸಾಮಾಜಿಕ ಜಾಲತಾಣ ಅಧ್ಯಕ್ಷ ಚನ್ನಪ್ಪ ಕೆ. ಹೊಸಳ್ಳಿ ತಿಳಿಸಿದರು.
ಛತ್ರಪ್ಪ ಅವರ ಶೈಕ್ಷಣಿಕ ಸೇವೆಯನ್ನು ಗುರುತಿಸಿ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿರುವುದು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಗ್ರಾಮಸ್ಥರಿಗೆ ಹೆಮ್ಮೆಯ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿಯೂ ಅವರ ಸೇವೆಗೆ ಮನ್ನಣೆ ದೊರೆಯಲಿ ಎಂದು ಶಿಕ್ಷಕರು, ಕುಟುಂಬಸ್ಥರು ಹಾಗೂ ಕೆ. ಹೊಸಳ್ಳಿಯ ಹಳೆಯ ವಿದ್ಯಾರ್ಥಿಗಳು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಇ.ಜೆ. ಹೊಸಳ್ಳಿ ಕ್ಯಾಂಪ್ ಶಾಲೆಯ ಮುಖ್ಯ ಶಿಕ್ಷಕಿ ವೀಣಾಬಾಯಿ, ಸಹ ಶಿಕ್ಷಕಿಯರಾದ ಆಶಾ, ಚಂದ್ರವತಿ, ವಿಜಯಲಕ್ಷ್ಮಿ, ಚೈತ್ರಾ, ರೋಹಿಣಿ, ಕಂಪ್ಯೂಟರ್ ಶಿಕ್ಷಕಿ ಶಾಂತಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.



