ಮಾನ್ವಿ: ತಾಲ್ಲೂಕಿನ ಕಾತರಕಿ ಗ್ರಾಮದಲ್ಲಿ ವಿದ್ಯುತ್ ಮೋಟಾರ್ ಚಾಲನೆ ಮಾಡಲು ತೆರಳಿದ್ದ ವೇಳೆ ವಿದ್ಯುತ್ ಕಂಬದ ಗೈ ವೈರ್‌ಗೆ ವಿದ್ಯುತ್ ಪ್ರವಹಿಸಿ ಮೃತಪಟ್ಟ ರೈತನ ಕುಟುಂಬಕ್ಕೆ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಹಾಗೂ ಶಾಸಕ ಹಂಪಯ್ಯ ನಾಯಕ ಭೇಟಿ ನೀಡಿ ಸಾಂತ್ವನ ಹೇಳಿದರು.

ಮೃತ ರೈತನ ಮನೆಗೆ ಭೇಟಿ ನೀಡಿದ ನಾಯಕರು ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿ, ಘಟನೆ ಕುರಿತು ಮಾಹಿತಿ ಪಡೆದುಕೊಂಡರು. ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯಿಂದ ಮೃತರ ಕುಟುಂಬಕ್ಕೆ ದೊರೆಯಬೇಕಾದ ಪರಿಹಾರ ಮತ್ತು ಅಗತ್ಯ ನೆರವನ್ನು ಶೀಘ್ರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಎನ್.ಎಸ್. ಬೋಸರಾಜು ಅವರು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಂಬಂಧಿಸಿದ ಕಾರ್ಯನಿರ್ವಾಹಕ ಅಭಿಯಂತರರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ವಿದ್ಯುತ್ ಅವಘಡದಿಂದ ಮೃತಪಟ್ಟ ರೈತನ ಕುಟುಂಬಕ್ಕೆ ನಿಯಮಾನುಸಾರ ದೊರೆಯಬೇಕಾದ ಪರಿಹಾರವನ್ನು ವಿಳಂಬ ಮಾಡದೆ ಒದಗಿಸುವಂತೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ತಾಲ್ಲೂಕಿನ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ತ್ರಿಫೇಸ್ ವಿದ್ಯುತ್‌ನ್ನು ಪ್ರತಿದಿನ ಏಳು ಗಂಟೆಗಳ ಕಾಲ ಸಮರ್ಪಕವಾಗಿ ಪೂರೈಸುವ ಅಗತ್ಯದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್, ಕಾಂಗ್ರೆಸ್ ಮುಖಂಡರಾದ ಶರಣಯ್ಯ ನಾಯಕ, ಸುಭಾಷ್ ನಾಯಕ, ಬಾಲಸ್ವಾಮಿ ಕೊಡ್ಲಿ, ದೇವೇಂದ್ರಪ್ಪ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.