ಮಾನ್ವಿ: ಪಟ್ಟಣದ ಜನತೆಗೆ ಸಮರ್ಪಕ ಕುಡಿಯುವ ನೀರು ಪೂರೈಸಲು ಅಗತ್ಯ ಅನುದಾನ ಒದಗಿಸಿದ್ದರೂ ಸಮಸ್ಯೆ ಮುಂದುವರಿದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು, ಬಾಕಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಶಾಸಕ ಹಂಪಯ್ಯ ನಾಯಕ ಅವರೊಂದಿಗೆ ಅಮೃತ್-2 ಯೋಜನೆ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳ ಜತೆ ರಬ್ಬಣಕಲ್ ಕೆರೆಗೆ ಭೇಟಿ ನೀಡಿದ ಅವರು, ಕೆರೆಯಲ್ಲಿನ ನೀರಿನ ಪ್ರಮಾಣ, ಪಂಪ್ಹೌಸ್ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಪಂಪ್ಹೌಸ್ಗೆ ಈಗಾಗಲೇ ತರಲಾಗಿರುವ ಹೊಸ ಮೋಟರ್ಗಳನ್ನು ಆದಷ್ಟು ಬೇಗ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ರಬ್ಬಣಕಲ್ ಕೆರೆಯಿಂದ ನೀರು ಸರಬರಾಜಿಗೆ ಸಂಬಂಧಿಸಿದ ವಿದ್ಯುತ್ ಸಂಪರ್ಕ ಕಾಮಗಾರಿಯನ್ನೂ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಕಾತರಕಿಯಲ್ಲಿ ತುಂಗಭದ್ರಾ ನದಿಯಿಂದ ರಬ್ಬಣಕಲ್ ಕೆರೆಗೆ ನೀರು ತರಲು ನಿರ್ಮಿಸಲಾಗುತ್ತಿರುವ ಜ್ಯಾಕ್ವೆಲ್ ಹಾಗೂ ಹೊಸ ಪೈಪ್ಲೈನ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲಿರುವ 100 ಕೆವಿ ಸಾಮರ್ಥ್ಯದ ಟ್ರಾನ್ಸ್ಫಾರ್ಮರ್ ಅನ್ನು 250 ಕೆವಿಗೆ ಮೇಲ್ದರ್ಜೆಗೇರಿಸುವುದರ ಜೊತೆಗೆ ಜ್ಯಾಕ್ವೆಲ್ ಸಂಪರ್ಕ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಿದರು.
ಇದೇ ವೇಳೆ ಮಾನ್ವಿ ಪಟ್ಟಣದ ಎಪಿಎಂಸಿ ಆವರಣದಲ್ಲಿರುವ 12.5 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಹಾಗೂ ಜಯನಗರದಲ್ಲಿ ನಿರ್ಮಾಣವಾಗುತ್ತಿರುವ 7.5 ಲಕ್ಷ ಲೀಟರ್ ಸಾಮರ್ಥ್ಯದ ಪ್ರತ್ಯೇಕ ನೀರಿನ ಟ್ಯಾಂಕ್ ಕಾಮಗಾರಿಗಳನ್ನೂ ಪರಿಶೀಲಿಸಿದರು. ಬಾಕಿ ಕಾಮಗಾರಿಗಳನ್ನು ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಿ ಪಟ್ಟಣಕ್ಕೆ ಸಮರ್ಪಕವಾಗಿ ನೀರು ಪೂರೈಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.
“ಕುಡಿಯುವ ನೀರು ಪೂರೈಕೆಗೆ ಅಗತ್ಯವಿರುವಷ್ಟು ಅನುದಾನ ಈಗಾಗಲೇ ನೀಡಲಾಗಿದೆ. ಆದರೂ ಜನರಿಗೆ ಸಮರ್ಪಕ ನೀರು ದೊರೆಯದಿರುವುದು ಸರಿಯಲ್ಲ. ಅಮೃತ್-2 ಯೋಜನೆಯ ನೀರು ಸಂಸ್ಕರಣಾ ಘಟಕ (ಡಬ್ಲ್ಯೂಟಿಪಿ), ಹೊಸ ಮೋಟರ್ ಅಳವಡಿಕೆ, ವಿದ್ಯುತ್ ಸಂಪರ್ಕ ಹಾಗೂ ಪೈಪ್ಲೈನ್ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕುಡಿಯುವ ನೀರಿನ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯ ಸಹಿಸುವುದಿಲ್ಲ. ಪ್ರತಿವಾರ ನೀರು ಸರಬರಾಜಿನ ಸ್ಥಿತಿಗತಿ ಹಾಗೂ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ನೀಡಬೇಕು” ಎಂದು ಬೋಸರಾಜು ಅಧಿಕಾರಿಗಳಿಗೆ ಸೂಚಿಸಿದರು.
ನಿಗದಿತ ಅವಧಿಯೊಳಗೆ ಎಲ್ಲ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಪಟ್ಟಣದ ಜನತೆಗೆ ಸಮರ್ಪಕ ಕುಡಿಯುವ ನೀರು ಪೂರೈಸಬೇಕು. ಕಾಮಗಾರಿ ಪೂರ್ಣಗೊಳಿಸುವಲ್ಲಿ ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸಿದರೆ ಸರ್ಕಾರದ ಗಮನಕ್ಕೆ ತಂದು ಕಠಿಣ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಎನ್.ಎಸ್. ಬೋಸರಾಜು ಹಾಗೂ ಶಾಸಕ ಹಂಪಯ್ಯ ನಾಯಕ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಅಮೃತ್-2 ಯೋಜನೆಯ ಕಾರ್ಯನಿರ್ವಾಹಕ ಅಭಿಯಂತರ ಗುರುರಾಜ್, ಕೆಡಬ್ಲ್ಯುಎಸ್ಎಸ್ಬಿ ಅಧಿಕಾರಿ ಚೌಹಾಣ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್, ಕಾಂಗ್ರೆಸ್ ಮುಖಂಡರಾದ ಶರಣಯ್ಯ ನಾಯಕ, ಸುಭಾಷ್ ನಾಯಕ, ಬಾಲಸ್ವಾಮಿ ಕೊಡ್ಲಿ, ಖಾಲಿದ್ ಗುರು ಸಾಹೇಬ್, ರಾಮಕೃಷ್ಣ, ಸುಖಮುನಿ, ದೇವೇಂದ್ರಪ್ಪ ಸೇರಿದಂತೆ ತಾಂತ್ರಿಕ ವಿಭಾಗದ ಅಧಿಕಾರಿಗಳು, ಪುರಸಭೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.



