ಸಿಂಧನೂರು: ಗಾಳಿ-ಮಳೆಗೆ ನೆಲಕ್ಕುರುಳಿದ್ದ ಬೃಹತ್ ಬಸರಿ ಮರವನ್ನು ಸ್ಥಳಾಂತರಿಸಿ ಮರುನಾಟಿ ಮಾಡುವ ಮೂಲಕ ಗೊರೇಬಾಳದ ಸಂಡೆ ಫಾರ್ ಸೋಷಿಯಲ್ ಸೇವಾ ಬಳಗ ಹಾಗೂ ವನಸಿರಿ ಫೌಂಡೇಷನ್ ರಾಯಚೂರು ಸದಸ್ಯರು ಪರಿಸರ ಕಾಳಜಿ ಮೆರೆದಿದ್ದಾರೆ.
ತಾಲೂಕಿನ ಗೊರೇಬಾಳ ಕ್ಯಾಂಪ್ ಸಮೀಪದ ಸಿಂಧನೂರು–ಗಂಗಾವತಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದ್ದ ಬೃಹತ್ ಬಸರಿ ಮರ ಇತ್ತೀಚೆಗೆ ಸುರಿದ ಗಾಳಿ-ಮಳೆಗೆ ನೆಲಕ್ಕುರುಳಿತ್ತು. ಮರವನ್ನು ಹಾಗೆಯೇ ನಾಶವಾಗಲು ಬಿಡದೆ ಅದಕ್ಕೆ ಮರುಜೀವ ನೀಡಬೇಕು ಎಂಬ ಉದ್ದೇಶದಿಂದ ಸಂಡೆ ಫಾರ್ ಸೋಷಿಯಲ್ ಸೇವಾ ಬಳಗದ ಸದಸ್ಯರು ಮುಂದಾಗಿದ್ದಾರೆ.
ಮರವನ್ನು ಉಳಿಸಿದರೆ ಗ್ರಾಮಕ್ಕೆ ಶುದ್ಧ ಗಾಳಿ ನೀಡುವುದರ ಜೊತೆಗೆ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಬಹುದು ಎಂಬ ಆಶಯದಿಂದ ಬಳಗದ ಸದಸ್ಯರು ವನಸಿರಿ ಫೌಂಡೇಷನ್ ರಾಜ್ಯಾಧ್ಯಕ್ಷ ಅಮರೇಗೌಡ ಮಲ್ಲಾಪುರ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದರು. ಇದಕ್ಕೆ ಸ್ಪಂದಿಸಿದ ಅವರು ಸ್ಥಳಕ್ಕೆ ಭೇಟಿ ನೀಡಿ ಮರವನ್ನು ಉಳಿಸುವ ಕಾರ್ಯಕ್ಕೆ ಕೈಜೋಡಿಸಿದರು.
ಸಂಡೆ ಫಾರ್ ಸೋಷಿಯಲ್ ಸೇವಾ ಬಳಗದ ಸದಸ್ಯರು, ಗ್ರಾಮದ ಹಿರಿಯರು ಹಾಗೂ ಯುವಕರ ಸಹಕಾರದೊಂದಿಗೆ ನೆಲಕ್ಕುರುಳಿದ್ದ ಮರವನ್ನು ಬುಡಸಮೇತ ತೆಗೆದು ಜೆಸಿಬಿ ಸಹಾಯದಿಂದ ಟ್ರ್ಯಾಕ್ಟರ್ಗೆ ಹೇರಲಾಯಿತು. ಬಳಿಕ ಅದನ್ನು ಗೊರೇಬಾಳ ಗ್ರಾಮದ ರುದ್ರಭೂಮಿಗೆ ಸ್ಥಳಾಂತರಿಸಿ ಮರುನಾಟಿ ಮಾಡಲಾಯಿತು. ಮರಕ್ಕೆ ನೀರುಣಿಸಿ ವಿಶೇಷ ಪೂಜೆಯನ್ನೂ ಸಲ್ಲಿಸಲಾಯಿತು.
ಸುಮಾರು ಐದು ಗಂಟೆಗಳ ಕಾಲ ನಡೆದ ಈ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಬೃಹತ್ ಮರವನ್ನು ಕಡಿದು ನಾಶಪಡಿಸುವ ಬದಲು ಅದನ್ನು ಸಂರಕ್ಷಿಸಿ ಮರುನಾಟಿ ಮಾಡಿದ ಪರಿಸರ ಕಾಳಜಿಗೆ ಗೊರೇಬಾಳ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು, ಸಾರ್ವಜನಿಕರು ಮತ್ತು ಪರಿಸರ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಷನ್ ಮಸ್ಕಿ ತಾಲೂಕು ಅಧ್ಯಕ್ಷ ರಾಜು ಬಳಗಾನೂರು, ಗೊರೇಬಾಳ ಸಂಡೆ ಫಾರ್ ಸೋಷಿಯಲ್ ಸೇವಾ ಬಳಗದ ಸುಬ್ಬಣ್ಣನವರ ಚನ್ನಬಸವ, ಜಂಬಣ್ಣನವರ ಮಲ್ಲನಗೌಡ, ಎನ್. ಷಣ್ಮುಖಗೌಡ, ಆರ್. ಸಿದ್ದಲಿಂಗೇಶ್ವರ, ಎಂ. ಶರಣೇಗೌಡ, ಎಚ್. ಚನ್ನಬಸವ, ಎಂ. ಚನ್ನಬಸವ, ಎಸ್. ಸುಧಾಕರಗೌಡ, ಟಿ. ಚನ್ನಬಸವ, ಎಂ. ನಾಗೇಶ, ಎಚ್. ದೇವೇಂದ್ರಗೌಡ, ಎನ್. ವೀರೇಶಗೌಡ, ಎಲ್. ಹೇಮರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.



