ಜಾಲಹಳ್ಳಿ, ಅ.4: ದೇವದುರ್ಗ ತಾಲೂಕಿನ ಜಾಲಹಳ್ಳಿ ಸಮೀಪದ ಕಕ್ಕಲದೊಡ್ಡಿ ಗ್ರಾಮವನ್ನು ಜಾಲಹಳ್ಳಿ ಹೋಬಳಿ ಹಾಗೂ ಜಾಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಕುರಿತು ಶನಿವಾರ ಕಕ್ಕಲದೊಡ್ಡಿ ಗ್ರಾಮದಲ್ಲಿ ನಡೆದ ಗ್ರಾಮಸ್ಥರ ಸಭೆಯಲ್ಲಿ ಗ್ರಾಮದ ಹಿರಿಯರು, ಮುಖಂಡರು, ಯುವಕರು ಹಾಗೂ ಮಹಿಳೆಯರು ಭಾಗವಹಿಸಿ, ಗ್ರಾಮದ ಆಡಳಿತಾತ್ಮಕ ಅನುಕೂಲತೆಗಳ ಕುರಿತು ಚರ್ಚಿಸಿದರು.

ಕಕ್ಕಲದೊಡ್ಡಿ ಗ್ರಾಮವು ಜಾಲಹಳ್ಳಿಗೆ ಸಮೀಪದಲ್ಲಿರುವುದರಿಂದ ಆಡಳಿತಾತ್ಮಕ ಹಾಗೂ ಸಾರ್ವಜನಿಕ ಸೇವೆಗಳ ದೃಷ್ಟಿಯಿಂದ ಜಾಲಹಳ್ಳಿ ಹೋಬಳಿ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿಸುವುದು ಸೂಕ್ತವಾಗಿದೆ. ಪ್ರಸ್ತುತ ವಿವಿಧ ಸರ್ಕಾರಿ ಸೇವೆಗಳು ಹಾಗೂ ಕಚೇರಿ ಕೆಲಸಗಳಿಗಾಗಿ ಗ್ರಾಮಸ್ಥರು ದೂರದ ಸ್ಥಳಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಇದರಿಂದ ಸಮಯ ಮತ್ತು ಹಣ ವ್ಯಯವಾಗುವುದರ ಜೊತೆಗೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಭೆಯಲ್ಲಿ ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು.

ಜಾಲಹಳ್ಳಿ ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಗ್ರಾಮವನ್ನು ಸೇರಿಸಿದರೆ ಕಂದಾಯ, ಪಂಚಾಯಿತಿ ಸೇರಿದಂತೆ ವಿವಿಧ ಸರ್ಕಾರಿ ಸೇವೆಗಳನ್ನು ಸುಲಭವಾಗಿ ಪಡೆಯಲು ಅನುಕೂಲವಾಗಲಿದೆ. ಅಲ್ಲದೆ, ಗ್ರಾಮದ ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೂ ಸಹಕಾರಿಯಾಗಲಿದೆ ಎಂದು ಗ್ರಾಮಸ್ಥರು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಕಕ್ಕಲದೊಡ್ಡಿ ಗ್ರಾಮವನ್ನು ಜಾಲಹಳ್ಳಿ ಹೋಬಳಿ ಹಾಗೂ ಜಾಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರ್ಪಡೆಗೊಳಿಸುವಂತೆ ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.

ಗ್ರಾಮಸ್ಥರ ಬಹುದಿನಗಳ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಅಗತ್ಯ ಆಡಳಿತಾತ್ಮಕ ಪ್ರಕ್ರಿಯೆ ಕೈಗೊಂಡು ಶೀಘ್ರವೇ ಜಾಲಹಳ್ಳಿ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಸಭೆಯಲ್ಲಿ ಯಲ್ಲನಗೌಡ ಬೆನಕನ, ಮಲ್ಲಿಕಾರ್ಜುನ ಬೆನಕನ, ಶಿವನಗೌಡ ಪೊಲೀಸ್ ಪಾಟೀಲ್, ಶರಣಗೌಡ ಬೆನಕನ, ಯಂಕಣ್ಣ ಸೌವಕರ್, ಭೀಮನಗೌಡ ಮಾಲಿ ಪಾಟೀಲ್, ಯಾಕಣ್ಣ ಮಾಡಬಾಳ್, ಶಿವನಗೌಡ ದೇಸಾಯಿ, ಶರಣಪ್ಪ ದೇಸಾಯಿ, ಚನ್ನಬಸವ ಮಾಲಿ ಪಾಟೀಲ್, ಶಿವನಗೌಡ ಮಲ್ಕಾಪುರ, ಸುಭಾಷ್ ಬೇವಿನಗಿಡ, ಅಂಬ್ರೆಯ್ಯ ಸ್ವಾಮಿ, ಮಲ್ಲಿಕಾರ್ಜುನ ಮಲ್ಕಾಪುರ, ವೆಂಕಟರೆಡ್ಡಿ ಬೆನಕನ, ಗುರುನಾಥ ಕಮತಿಗಿ, ಅಯ್ಯನಗೌಡ ಮಾಲಿ ಪಾಟೀಲ್, ಮಲ್ಲಣ್ಣ ಮಲ್ಕಾಪುರ, ಮಲ್ಲಣ್ಣ ಸಂಗಪುರ, ನಿಂಗಣ್ಣ ಕರಕಿಳ್ಳಿ, ಮುದ್ದಕಣ್ಣ ಮಲ್ಕಾಪುರ, ಶರಣಪ್ಪ ಬಾಳಗನ್ಯೂರ, ಬಸವರಾಜ ಬಸರೆಡ್ಡಿ, ಶಿವರೆಡ್ಡಿ ಗಣೇಕಲ್, ಸಿದ್ದುಣ್ಣ ಕಬೀರ್, ರಾಜೇಶ್ ಸಾಬ್, ಸಣ್ಣಲಾಲ್ ಸಾಬ್, ಮಮ್ಮಾ ಸಾಬ್, ಖಾಜಾ ಸಾಬ್, ಸಾಬಣ್ಣ ಜಮಾಲ್ದಿನಿ, ಹನುಮಂತರಾಯ ಅಸರತಿ, ಜಾನಪ್ಪ ಜಮಾಲ್ದಿನಿ, ಹನುಮಂತ ಅಸರತಿ, ನಿಂಗಣ್ಣ ಅಸರತಿ, ಗೋಯಪ್ಪ ವಟಗಲ್, ತಿರುಪತಿ ವಟಗಲ್, ರಂಗಪ್ಪ, ಶಿವುಪ್ಪ, ರಾಮಪ್ಪ, ಹಲಗಪ್ಪ, ನಾಗಪ್ಪ ಸೇರಿದಂತೆ ಗ್ರಾಮದ ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.