ದೇವದುರ್ಗ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಮಹಾತ್ಮ ಪ್ರೊ. ಬಿ. ಕೃಷ್ಣಪ್ಪ ನೇತೃತ್ವದ ಸಂಘಟನೆ) ರಿ.386/2020-21ರ ರಾಯಚೂರು ಜಿಲ್ಲಾ ಸಮಿತಿ ವತಿಯಿಂದ ದೇವದುರ್ಗ ಹಾಗೂ ಅರಕೇರಾ ತಾಲೂಕು ಸಮಿತಿಗಳನ್ನು ರಚಿಸಿ, ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ರಾಜ್ಯ ಸಂಘಟನಾ ಸಂಚಾಲಕ ಶಿವಪ್ಪ ಪಲಕನಮರಡಿ ಅವರ ನೇತೃತ್ವದಲ್ಲಿ, ತುರುಮಂದೆಪ್ಪ ಕಟ್ಟಿಮನಿ ಹಾಗೂ ಕಾಶಿಮಪ್ಪ ಮುರಾರಿ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಉಭಯ ತಾಲೂಕುಗಳ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ದೇವದುರ್ಗ ತಾಲೂಕು ಸಂಚಾಲಕರಾಗಿ ರಮೇಶ್ ಭಾವಿಮನಿ ಆಯ್ಕೆಯಾದರು. ಸಂಘಟನಾ ಸಂಚಾಲಕರಾಗಿ ರಾಮು ಮಾದರಕಲ್, ಡೇವಿಡ್ ಮಸರಕಲ್, ಚನ್ನಬಸವ ಕೊಪ್ಪರ, ಸಿದ್ದಪ್ಪ ಬೂದಿನಾಳ, ಜಯಂ ಮಸರಕಲ್, ಸಂಗಮೇಶ ಲಿಂಗದಹಳ್ಳಿ, ಮಹೇಶ್ ಹಿರೇಬುದೂರು ಹಾಗೂ ಮೌನೇಶ್ ಗಾಂಜಿ ಅವರನ್ನು ನೇಮಕ ಮಾಡಲಾಯಿತು. ಖಜಾಂಚಿಯಾಗಿ ರಮೇಶ್ ಹೆದ್ದೆರಿ ಆಯ್ಕೆಯಾದರು.

ಅರಕೇರಾ ತಾಲೂಕು ಸಂಚಾಲಕರಾಗಿ ರಾಮಪ್ಪ ಮೇಸ್ತ್ರಿ ಮುಷ್ಟೂರ್ ಅವರನ್ನು ಆಯ್ಕೆ ಮಾಡಲಾಯಿತು. ಸಂಘಟನಾ ಸಂಚಾಲಕರಾಗಿ ಶಿವಪ್ಪ ಜೆರಬಂಡಿ, ಈಶಪ್ಪ ಶಿವಂಗಿ, ಮೌನೇಶ್ ಕರಡೋಣ, ಆದೇಪ್ಪ ಮ್ಯಾಕಲದೊಡ್ಡಿ, ಸಿದ್ದಪ್ಪ ಜಿಂಕಲ್ ಪಲಕನಮರಡಿ, ನಿಂಗಪ್ಪ ತಿಪ್ಪಲದಿನ್ನಿ ಹಾಗೂ ರಮೇಶ್ ಭೋವಿ ಗೆಜ್ಜೆಬಾವಿ ಅವರನ್ನು ನೇಮಕ ಮಾಡಲಾಯಿತು. ಖಜಾಂಚಿಯಾಗಿ ವೀರೇಶ್ ಭೇರಿ ಆಯ್ಕೆಯಾದರು.

ದಲಿತ ಮಹಿಳಾ ಒಕ್ಕೂಟದ ಸಂಚಾಲಕರಾಗಿ ಚನ್ನಮ್ಮ ಹಾಗೂ ಅರಕೇರಾ ಅಲ್ಪಸಂಖ್ಯಾತ ಸಂಚಾಲಕರಾಗಿ ಗಫೂರ್ ದೇವದುರ್ಗ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಸಂಘಟನಾ ಸಂಚಾಲಕ ಶಿವಪ್ಪ ಪಲಕನಮರಡಿ, ಪ್ರೊ. ಬಿ. ಕೃಷ್ಣಪ್ಪ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ ಮತ್ತು ಸಿದ್ಧಾಂತಗಳ ಆಧಾರದಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸಬೇಕು. ಸಾಮಾಜಿಕ ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸುವ ಮೂಲಕ ಎಲ್ಲ ಜಾತಿ-ಸಮುದಾಯಗಳ ಬಡವರಿಗೆ ದೇಶದ ಸಂಪನ್ಮೂಲಗಳು ಸಮಾನವಾಗಿ ಹಂಚಿಕೆಯಾಗುವಂತೆ ಧ್ವನಿ ಎತ್ತಬೇಕು ಎಂದರು.

ಬಡವರು ಹಾಗೂ ಶೋಷಿತರಿಗೆ ವಸತಿ, ನಿವೇಶನ ಮತ್ತು ಅಗತ್ಯ ಮೂಲಸೌಕರ್ಯಗಳು ದೊರೆಯುವಂತೆ ಸಂಘಟನೆ ಹೋರಾಟ ನಡೆಸಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಚಳವಳಿಯನ್ನು ಸದಾ ಜೀವಂತವಾಗಿಡಬೇಕು ಎಂದು ನೂತನ ಪದಾಧಿಕಾರಿಗಳಿಗೆ ಕರೆ ನೀಡಿದರು.

ಸಭೆಯಲ್ಲಿ ದಲಿತ ಕವಿ ಪ್ರಶಾಂತ ದಾನಪ್ಪ, ರಡ್ಡೆಪ್ಪ ಮಸ್ಕಿ, ಸಂಚಾಲಕರಾದ ಸಾಬಣ್ಣ ಕಮಲದಿನ್ನಿ, ಬಾಳಪ್ಪ ಬಾವಿಮನಿ, ಚನ್ನಬಸವ ನಾಯಕ ಮ್ಯಾಕಲದೊಡ್ಡಿ, ರಮೇಶ ಬಾಗೂರು, ಯಲ್ಲಪ್ಪ ಆಲ್ದರ್ತಿ, ರಮೇಶ ಜಾಡಲದಿನ್ನಿ, ಕಾಜಹುಸೆನ ಪಲಕನಮರಡಿ ಸೇರಿದಂತೆ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.