ಲಿಂಗಸೂಗೂರು: ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವುದರ ಜೊತೆಗೆ ಅದರ ಪ್ರಮುಖ ಅಂಗಗಳಲ್ಲಿ ಒಂದಾದ ಶಾಸಕಾಂಗದ ಕಾರ್ಯನಿರ್ವಹಣೆ ಕುರಿತು ಪ್ರಾಯೋಗಿಕ ಜ್ಞಾನ ಮೂಡಿಸುವಲ್ಲಿ ಯುವ ಸಂಸತ್ ಕಾರ್ಯಕ್ರಮ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಹಸೀಲ್ದಾರ್ ಸತ್ಯಮ್ಮ ಹೇಳಿದರು.

ಪಟ್ಟಣದ ಶ್ರೀ ವಿಜಯಮಹಾಂತೇಶ್ವರ ಶಾಖಾ ಮಠದ ಆವರಣದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ತಾಲೂಕು ಮಟ್ಟದ ಯುವ ಸಂಸತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯುವಜನತೆಯಲ್ಲಿ ಹೆಚ್ಚುತ್ತಿರುವ ಮಾದಕ ವ್ಯಸನದ ಅಪಾಯ, ಪ್ರಸ್ತುತ ರೈತರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಯುವ ಸಂಸತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಶಾಸಕಾಂಗದ ಕಾರ್ಯಚಟುವಟಿಕೆಗಳು, ಜನಪ್ರತಿನಿಧಿಗಳ ಜವಾಬ್ದಾರಿ ಹಾಗೂ ಆಡಳಿತ ವ್ಯವಸ್ಥೆಯ ಕುರಿತು ಸಮಗ್ರ ಮಾಹಿತಿ ಪಡೆದುಕೊಳ್ಳಬೇಕು ಎಂದರು.

ಯುವ ಪೀಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮಹತ್ವವನ್ನು ಅರಿತುಕೊಂಡು ಭವಿಷ್ಯದಲ್ಲಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಹಾಗೂ ಸಮಾಜದ ಸಮಸ್ಯೆಗಳ ಪರಿಹಾರಕ್ಕೆ ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ತಾಲೂಕು ಮಟ್ಟದ ಯುವ ಸಂಸತ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ವಿದ್ಯಾರ್ಥಿಗಳನ್ನು ಮುಂದಿನ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.

ಯುವ ಸಂಸತ್‌ನಲ್ಲಿ ನೈಜ ಶಾಸಕಾಂಗ ಅಧಿವೇಶನದ ಮಾದರಿಯಲ್ಲಿ ಸಭಾಧ್ಯಕ್ಷ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ಸಚಿವರು ಹಾಗೂ ಶಾಸಕರ ಪಾತ್ರಗಳನ್ನು ವಿದ್ಯಾರ್ಥಿಗಳು ನಿರ್ವಹಿಸಿದರು. ಆಡಳಿತ ಮತ್ತು ವಿರೋಧ ಪಕ್ಷಗಳ ಪಾತ್ರ ವಹಿಸಿದ ವಿದ್ಯಾರ್ಥಿಗಳು ವಿವಿಧ ಸಾರ್ವಜನಿಕ ಸಮಸ್ಯೆಗಳ ಕುರಿತು ಪ್ರಶ್ನೋತ್ತರ, ಪರ-ವಿರೋಧ ಚರ್ಚೆ ನಡೆಸುವ ಮೂಲಕ ಶಾಸಕಾಂಗ ಕಲಾಪದ ಪ್ರಾತ್ಯಕ್ಷಿಕೆ ನೀಡಿದರು.

ಕಾರ್ಯಕ್ರಮದಲ್ಲಿ ಸಿವಿಲ್ ಪ್ರಧಾನ ನ್ಯಾಯಾಧೀಶ ಕೆ. ಅಂಬಣ್ಣ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನದ ಮೌಲ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ಸಮಾಜ ಕಲ್ಯಾಣ ಅಧಿಕಾರಿ ರವೀಂದ್ರ ಉಪ್ಪಾರ, ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತ ಹುನೂರು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗರತ್ನ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವೆಂಕಟನಾರಾಯಣ, ಪಿ.ಐ. ಹೊಸಕೇರಪ್ಪ, ಎನ್. ನಟರಾಜ, ಮುರಳೀಧರ ರಾವು, ಭೂಪನಗೌಡ, ಚಂದ್ರಶೇಖರ, ವೆಂಕಟೇಶ್, ಹನುಮಂತಪ್ಪ, ಹಾಜಿಬಾಬು ಕಲ್ಯಾಣಿ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.