ದೇವದುರ್ಗ: ನಗರದ ಭಾರತ ಕಾಟನ್ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅಪಾರ ಪ್ರಮಾಣದ ಹತ್ತಿ ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಕಾರ್ಖಾನೆಯಲ್ಲಿ ಹತ್ತಿ ಸಂಗ್ರಹಿಸಿದ್ದ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ಕೆಲವೇ ಸಮಯದಲ್ಲಿ ವ್ಯಾಪಕವಾಗಿ ಹರಡಿದೆ. ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ವಾಹನದೊಂದಿಗೆ ಸ್ಥಳಕ್ಕೆ ಧಾವಿಸಿ ಬೆಂಕಿ ನಿಯಂತ್ರಿಸಲು ಕಾರ್ಯಾಚರಣೆ ನಡೆಸಿದರು. ಅಗ್ನಿ ಅವಘಡಕ್ಕೆ ನಿಖರ ಕಾರಣ ಹಾಗೂ ಸಂಭವಿಸಿರುವ ಒಟ್ಟು ನಷ್ಟದ ಪ್ರಮಾಣ ಇನ್ನಷ್ಟೇ ತಿಳಿದುಬರಬೇಕಿದೆ.
ಘಟನೆ ಹಿನ್ನೆಲೆಯಲ್ಲಿ ದೇವದುರ್ಗ ಅಗ್ನಿಶಾಮಕ ಠಾಣೆಯಲ್ಲಿರುವ ಸೌಲಭ್ಯಗಳ ಕೊರತೆಯ ಕುರಿತು ಜಿನ್ನಿಂಗ್ ಕಾರ್ಖಾನೆ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಅಗ್ನಿಶಾಮಕ ಠಾಣೆಯಲ್ಲಿ ಅಗತ್ಯಕ್ಕೆ ತಕ್ಕಷ್ಟು ವಾಹನಗಳು ಲಭ್ಯವಿಲ್ಲ. ಕೇವಲ ಒಂದು ಅಗ್ನಿಶಾಮಕ ವಾಹನವನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇರುವುದರಿಂದ ಏಕಕಾಲದಲ್ಲಿ ವಿವಿಧೆಡೆ ತುರ್ತು ಘಟನೆಗಳು ಸಂಭವಿಸಿದರೆ ಸಮರ್ಪಕವಾಗಿ ಸ್ಪಂದಿಸುವುದು ಕಷ್ಟವಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ.
ದೇವದುರ್ಗ ಭಾಗದಲ್ಲಿ 15ಕ್ಕೂ ಹೆಚ್ಚು ಹತ್ತಿ ಜಿನ್ನಿಂಗ್ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿದೆ. ಹತ್ತಿಯಂತಹ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸುವ ಕೈಗಾರಿಕೆಗಳು ಇರುವುದರಿಂದ ಅಗ್ನಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಮಾಲೀಕರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸರ್ಕಾರದ ಗಮನ ಸೆಳೆದು ದೇವದುರ್ಗ ಅಗ್ನಿಶಾಮಕ ಠಾಣೆಗೆ ಹೆಚ್ಚುವರಿ ಅಗ್ನಿಶಾಮಕ ವಾಹನಗಳು, ಅಗತ್ಯ ಸಿಬ್ಬಂದಿ ಹಾಗೂ ಆಧುನಿಕ ಅಗ್ನಿ ನಿಯಂತ್ರಣ ಉಪಕರಣಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ಇಂತಹ ಅವಘಡಗಳು ಸಂಭವಿಸಿದಾಗ ತ್ವರಿತವಾಗಿ ಕಾರ್ಯಾಚರಣೆ ನಡೆಸಿ ಜೀವ ಮತ್ತು ಆಸ್ತಿ ಹಾನಿಯನ್ನು ತಗ್ಗಿಸಲು ಅಗ್ನಿಶಾಮಕ ಠಾಣೆಯನ್ನು ಅಗತ್ಯ ಮೂಲಸೌಕರ್ಯಗಳೊಂದಿಗೆ ಬಲಪಡಿಸಬೇಕು ಎಂದು ಜಿನ್ನಿಂಗ್ ಕಾರ್ಖಾನೆ ಮಾಲೀಕರು ಒತ್ತಾಯಿಸಿದ್ದಾರೆ.



