ಮಾನ್ವಿ: ಬೆಂಗಳೂರಿನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ಗ್ಲೋಬಲ್ ಆಕ್ಸಿಲರೇಟರ್ ಮಿಷನ್ ಸಮಿಟ್ (ಜಿ.ಎ.ವಿ.ಎಸ್.) ಕುರಿತು ಜಾಗೃತಿ ಮೂಡಿಸುವ ಹಾಗೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ಪಟ್ಟಣದಲ್ಲಿ ಸಂಕಲ್ಪ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಯಿತು.
ಪಟ್ಟಣದ ಸೂರ್ಯ ಫಂಕ್ಷನ್ ಹಾಲ್ ಸಮೀಪ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಜೆ. ಹನುಮಂತಯ್ಯ ಶೆಟ್ಟಿ, ಅ.2ರಂದು ಬೀದರ್ನಿಂದ ಸಂಕಲ್ಪ ಬೈಕ್ ರ್ಯಾಲಿಗೆ ಚಾಲನೆ ನೀಡಲಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸುವ ಮೂಲಕ ಜಿ.ಎ.ವಿ.ಎಸ್. ಕಾರ್ಯಕ್ರಮದ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ಆರ್ಯವೈಶ್ಯ ಮಹಾಸಭಾ 118 ವರ್ಷಗಳನ್ನು ಪೂರೈಸಿದ್ದು, ರಾಜ್ಯದಾದ್ಯಂತ ವಿವಿಧ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಸಮಾಜವನ್ನು ಸಂಘಟಿಸುವ ಕಾರ್ಯ ಮಾಡುತ್ತಿದೆ. ವಿಶೇಷವಾಗಿ ಯುವ ಸಮುದಾಯಕ್ಕೆ ಅಂತರರಾಷ್ಟ್ರೀಯ ಮಟ್ಟದ ವ್ಯಾಪಾರ, ಉದ್ಯಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಪರಿಚಯಿಸಿ ಹೊಸ ಅವಕಾಶಗಳತ್ತ ಪ್ರೋತ್ಸಾಹಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು.
ಡಿ.25, 26 ಮತ್ತು 27ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಂತರರಾಷ್ಟ್ರೀಯ ಮಟ್ಟದ ಜಿ.ಎ.ವಿ.ಎಸ್. ಕಾರ್ಯಕ್ರಮ ಆಯೋಜಿಸಲಾಗಿದ್ದು, ವ್ಯಾಪಾರ ಮತ್ತು ಉದ್ಯಮ, ಯುವ ಸಬಲೀಕರಣ, ಮಹಿಳಾ ಸಬಲೀಕರಣ ಹಾಗೂ ಸಾಮಾಜಿಕ ಜಾಗೃತಿ ಸೇರಿದಂತೆ ವಿವಿಧ ವಿಷಯಗಳಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಮಾನ್ವಿ ತಾಲೂಕಿನ ಆರ್ಯವೈಶ್ಯ ಸಮುದಾಯದ ಪುರುಷರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡರು. ಪಟ್ಟಣದ ಬಸವ ವೃತ್ತ, ವಾಸವಿ ಕಲ್ಯಾಣ ಮಂಟಪ, ಬಸ್ ನಿಲ್ದಾಣ ಹಾಗೂ ವಾಲ್ಮೀಕಿ ವೃತ್ತದ ಮೂಲಕ ಪೋತ್ನಾಳ್ವರೆಗೆ ರ್ಯಾಲಿ ಸಂಚರಿಸಿ ಕಾರ್ಯಕ್ರಮದ ಕುರಿತು ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ನಗರೇಶ್ವರ ಆರ್ಯವೈಶ್ಯ ಸಂಘದ ತಾಲೂಕು ಅಧ್ಯಕ್ಷ ಆರ್. ಮುತ್ತುರಾಜ್ ಶೆಟ್ಟಿ, ಕಾರ್ಯದರ್ಶಿ ಬಿ. ಈರಣ್ಣ ಶೆಟ್ಟಿ, ಕರ್ನಾಟಕ ಆರ್ಯವೈಶ್ಯ ಮಹಾಸಭಾದ ರಾಜ್ಯ ಹಿರಿಯ ಉಪಾಧ್ಯಕ್ಷ ಕುಂಟ್ನಾಳ್ ವೆಂಕಟೇಶ ಶೆಟ್ಟಿ, ರಾಜ್ಯ ನಿರ್ದೇಶಕರಾದ ಭೀಮಶಂಕರ ಶೆಟ್ಟಿ, ಜಗದೀಶ ಗುಪ್ತ, ವಾಸುದೇವ ಶೆಟ್ಟಿ, ಪದಾಧಿಕಾರಿಗಳಾದ ಕೆ. ನವೀನ್ ಕುಮಾರ್, ರಾಘವೇಂದ್ರ ಶೆಟ್ಟಿ, ಪವನ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.



