ಹಟ್ಟಿ ಚಿನ್ನದ ಗಣಿ: ಗುರುಗುಂಟಾ ವ್ಯಾಪ್ತಿಯ ತೋಟದೊಡ್ಡಿಗಳಲ್ಲಿರುವ ಮನೆಗಳಿಗೆ ಸಿಂಗಲ್ ಫೇಸ್ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಗುರುಗುಂಟಾ ಭಾಗದ ತೋಟದೊಡ್ಡಿಗಳಲ್ಲಿ ವಾಸಿಸುತ್ತಿರುವ ಬಡ ಹಾಗೂ ಹಿಂದುಳಿದ ವರ್ಗಗಳ ಹಲವು ಕುಟುಂಬಗಳಿಗೆ ಸಮರ್ಪಕ ವಿದ್ಯುತ್ ಸೌಲಭ್ಯ ಇಲ್ಲದ ಕಾರಣ ರಾತ್ರಿ ವೇಳೆ ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೂ ತೀವ್ರ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಪ್ರಸ್ತುತ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ಅರ್ಧವಾರ್ಷಿಕ ಪರೀಕ್ಷೆಗಳು ನಡೆಯುತ್ತಿದ್ದು, ವಿದ್ಯುತ್ ಇಲ್ಲದಿರುವುದರಿಂದ ರಾತ್ರಿ ವೇಳೆ ಓದಲು ಹಾಗೂ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಹಲವು ಮೂಲಸೌಲಭ್ಯಗಳ ಕೊರತೆಯ ನಡುವೆ ಗ್ರಾಮೀಣ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ವಿದ್ಯುತ್ ಸಮಸ್ಯೆಯಿಂದ ಅವರ ಶೈಕ್ಷಣಿಕ ಪ್ರಗತಿಗೆ ಮತ್ತಷ್ಟು ಹಿನ್ನಡೆಯಾಗುತ್ತಿದೆ ಎಂದು ಸಂಘದ ಪದಾಧಿಕಾರಿಗಳು ದೂರಿದರು.

ಪಟ್ಟಣ ಪ್ರದೇಶದ ವಿದ್ಯಾರ್ಥಿಗಳಿಗೆ ದೊರೆಯುವ ಶೈಕ್ಷಣಿಕ ವಾತಾವರಣ ಹಾಗೂ ಮೂಲಸೌಲಭ್ಯಗಳು ತೋಟದೊಡ್ಡಿಗಳ ವಿದ್ಯಾರ್ಥಿಗಳಿಗೆ ದೊರೆಯುತ್ತಿಲ್ಲ. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ವಿವಿಧ ಶೈಕ್ಷಣಿಕ ಚಟುವಟಿಕೆಗಳಲ್ಲಿ ಇತರ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಲು ತೊಂದರೆಯಾಗುತ್ತಿದೆ ಎಂದು ಹೇಳಿದರು.

ವಿದ್ಯುತ್ ಇಲ್ಲದಿರುವುದರಿಂದ ರಾತ್ರಿ ವೇಳೆ ಗ್ರಾಮಸ್ಥರ ಸುರಕ್ಷತೆಗೂ ಸಮಸ್ಯೆಯಾಗುತ್ತಿದೆ. ತೋಟದೊಡ್ಡಿಗಳ ಸುತ್ತಮುತ್ತ ಹಾವು, ಚೇಳು ಸೇರಿದಂತೆ ವಿಷಜಂತುಗಳ ಹಾವಳಿ ಇದ್ದು, ಕತ್ತಲಿನಲ್ಲಿ ಸಂಚರಿಸುವುದು ಅಪಾಯಕಾರಿಯಾಗಿದೆ. ಯಾವುದೇ ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಗುರುಗುಂಟಾ ವ್ಯಾಪ್ತಿಯ ತೋಟದೊಡ್ಡಿ ಮನೆಗಳಿಗೆ ತಕ್ಷಣ ಸಿಂಗಲ್ ಫೇಸ್ ವಿದ್ಯುತ್ ಸಂಪರ್ಕ ಕಲ್ಪಿಸಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು. ಎರಡು ದಿನಗಳೊಳಗೆ ಸಮಸ್ಯೆ ಪರಿಹರಿಸದಿದ್ದರೆ ಗುರುಗುಂಟಾ ವಿದ್ಯುತ್ ಉಪಕೇಂದ್ರದ ಬಳಿ ವಿವಿಧ ಗ್ರಾಮಗಳ ಕುಟುಂಬಸ್ಥರೊಂದಿಗೆ ಪ್ರತಿಭಟನೆ ಹಾಗೂ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ದುರ್ಗಾ ಪ್ರಸಾದ, ಕಾರ್ಯದರ್ಶಿ ಬಸವರಾಜ ಅಂಗಡಿ, ವಿಜಯಕುಮಾರ್, ಮಹ್ಮದ್ ಸಾಬ್, ರಾಮಣ್ಣ ಗೌಡ, ನಾಗಪ್ಪ, ಹುಲುಗಪ್ಪ, ಮಲ್ಲೇಶ್, ಚಂದ್ರಶೇಖರ್, ದುರುಗಪ್ಪ ಗೌಡ, ಶಿವಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.