ಮಾನ್ವಿ: ಮಕ್ಕಳಿಗೆ ಪಠ್ಯ ಶಿಕ್ಷಣದ ಜೊತೆಗೆ ಹಣದ ಮಹತ್ವ, ಉಳಿತಾಯದ ಅಭ್ಯಾಸ, ನಿಯಂತ್ರಿತ ಖರ್ಚು, ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ವಿಮೆಯ ಕುರಿತು ಪ್ರಾಯೋಗಿಕ ಜ್ಞಾನ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಮಾನ್ವಿ ಪಟ್ಟಣ ಸಹಕಾರಿ ಬ್ಯಾಂಕಿನ ಸಿಇಒ ಹಾಗೂ ಲಯನ್ಸ್ ಕ್ಲಬ್ನ ನಾಗರಾಜ್ ಹೇಳಿದರು.
ಪಟ್ಟಣದಲ್ಲಿ ಸಮುತ್ಕರ್ಷ ಸಂಸ್ಥೆಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಆರ್ಥಿಕ ವ್ಯವಸ್ಥೆ, ಬ್ಯಾಂಕಿಂಗ್ ಹಾಗೂ ವಿಮೆ ಕುರಿತ ವಿಶೇಷ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಹಣವನ್ನು ಜವಾಬ್ದಾರಿಯಿಂದ ಬಳಸುವ ವಿಧಾನವನ್ನು ಪಾಲಕರು ತಿಳಿಸಿಕೊಡಬೇಕು. ಗಳಿಕೆ, ಉಳಿತಾಯ ಮತ್ತು ಅಗತ್ಯಕ್ಕೆ ತಕ್ಕಂತೆ ಖರ್ಚು ಮಾಡುವ ಅಭ್ಯಾಸ ಬೆಳೆಸುವುದರಿಂದ ಭವಿಷ್ಯದಲ್ಲಿ ಆರ್ಥಿಕ ಶಿಸ್ತು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಬ್ಯಾಂಕ್ ಖಾತೆ, ಉಳಿತಾಯ, ಹಣಕಾಸು ವ್ಯವಹಾರ ಹಾಗೂ ವಿವಿಧ ರೀತಿಯ ವಿಮಾ ಯೋಜನೆಗಳ ಕುರಿತು ಮೂಲಭೂತ ಅರಿವು ಮೂಡಿಸುವುದು ಸಹ ಮುಖ್ಯವಾಗಿದೆ ಎಂದರು.
ಶಾಲೆಗಳಲ್ಲಿ ವಿಷಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಅದರೊಂದಿಗೆ ವಿದ್ಯಾರ್ಥಿಗಳ ನಿತ್ಯಜೀವನಕ್ಕೆ ಅಗತ್ಯವಾದ ಹಣಕಾಸು ಸಾಕ್ಷರತೆ ಸೇರಿದಂತೆ ಪ್ರಾಯೋಗಿಕ ವಿಷಯಗಳನ್ನೂ ಕಲಿಸಬೇಕಾಗಿದೆ. ಇಂತಹ ಜ್ಞಾನವು ವಿದ್ಯಾರ್ಥಿಗಳು ಭವಿಷ್ಯದಲ್ಲಿ ಜವಾಬ್ದಾರಿಯುತ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುತ್ತದೆ ಎಂದು ತಿಳಿಸಿದರು.
ಸಮುತ್ಕರ್ಷ ಸಂಸ್ಥೆಯು ಐಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಮೂಲಕ ಸದೃಢ ಭಾರತ ನಿರ್ಮಾಣದ ಆಶಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಮಾನ್ವಿ ನಗರದಲ್ಲಿಯೂ ಸಂಸ್ಥೆಯ ತರಗತಿಗಳು ನಡೆಯುತ್ತಿರುವುದು ಸಂತಸದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಸಮುತ್ಕರ್ಷ ಮಾನ್ವಿಯ ನರಸಿಂಹಮೂರ್ತಿ ದೇಸಾಯಿ ಮಾತನಾಡಿದರು. ನಾಗರಾಜ್ ಅವರ ಪರಿಚಯ ಹಾಗೂ ಸಮುತ್ಕರ್ಷ ಸಂಸ್ಥೆಯ ಚಟುವಟಿಕೆಗಳ ಕುರಿತು ಡಾ. ವಿವೇಕಾನಂದ ಹಬೀಬ್ ಮಾಹಿತಿ ನೀಡಿದರು.
ವಿಶೇಷವಾಗಿ ವಿದ್ಯಾರ್ಥಿಗಳೇ ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆ ಮಾಡುವ ಮೂಲಕ ಗಮನ ಸೆಳೆದರು. ಇದೇ ಸಂದರ್ಭದಲ್ಲಿ ಕ್ಯಾಪ್ಟನ್ ಸ್ಮಿತ್ ಅವರ ಸಾಹಸ ಹಾಗೂ ಭಾರತೀಯರ ಧೈರ್ಯ-ಸಾಹಸದ ಕುರಿತು ವಿದ್ಯಾರ್ಥಿ ಶಶಾಂಕ್ ಮಾಹಿತಿ ಹಂಚಿಕೊಂಡರು.
ಕಾರ್ಯಕ್ರಮದ ಕೊನೆಯಲ್ಲಿ ಸಮುತ್ಕರ್ಷ ಸಂಸ್ಥೆಯ ವತಿಯಿಂದ ನಾಗರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.



