ಇಂದಿನ ದಿನಗಳಲ್ಲಿ ಪಾಲಕರು ತಮ್ಮ ಮಕ್ಕಳನ್ನು ವೈದ್ಯರು ಅಥವಾ ಇಂಜಿನಿಯರ್ಗಳಾಗಿ ರೂಪಿಸಬೇಕು ಎಂಬ ಆಸೆಯಿಂದ ಬಾಲ್ಯದಲ್ಲಿಯೇ ಜೆಇಇ, ನೀಟ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನ ಹರಿಸುತ್ತಿದ್ದಾರೆ. ಇದು ತಪ್ಪಲ್ಲ. ಆದರೆ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳ ಜೊತೆಗೆ ಯುಪಿಎಸ್ಸಿ ಸೇರಿದಂತೆ ಕೇಂದ್ರ ಮಟ್ಟದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ವಿದ್ಯಾರ್ಥಿಗಳು ಸಾಧನೆ ಮಾಡುವ ಅವಕಾಶಗಳಿವೆ. ಇಂತಹ ವಿಶಾಲ ದೃಷ್ಟಿಕೋನವನ್ನು ಮಕ್ಕಳಲ್ಲಿ ಬೆಳೆಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯೇ ‘ಸಮುತ್ಕರ್ಷ’.
2015ರಲ್ಲಿ ಹುಬ್ಬಳ್ಳಿಯಲ್ಲಿ ಆರಂಭವಾದ ಸಮುತ್ಕರ್ಷ ಸಂಸ್ಥೆ, ಮಕ್ಕಳಿಗೆ ಕೇವಲ ಸಿವಿಲ್ ಸರ್ವಿಸ್ ಪರೀಕ್ಷೆಗಳ ಪೂರ್ವಸಿದ್ಧತೆ ನೀಡುವುದಲ್ಲದೆ, ಜವಾಬ್ದಾರಿಯುತ ನಾಗರಿಕರು ಹಾಗೂ ಭವಿಷ್ಯದ ನಾಯಕತ್ವವನ್ನು ರೂಪಿಸುವ ಗುರಿಯೊಂದಿಗೆ ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಏಕತೆ, ಜ್ಞಾನ ಹಂಚಿಕೆ, ಕೌಶಲ್ಯಾಭಿವೃದ್ಧಿ ಮತ್ತು ಸಮಾಜಮುಖಿ ಚಿಂತನೆಗಳನ್ನು ಮಕ್ಕಳಲ್ಲಿ ಬೆಳೆಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ.
ಆರನೇ ತರಗತಿಯಿಂದ ಒಂಬತ್ತನೇ ತರಗತಿವರೆಗಿನ ವಿದ್ಯಾರ್ಥಿಗಳಿಗಾಗಿ ‘ಶ್ರದ್ಧಾ’ ಮತ್ತು ‘ಮೇಧಾ’ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಯುಪಿಎಸ್ಸಿ ಪರೀಕ್ಷೆಗಳ ಕುರಿತು ಪ್ರಾಥಮಿಕ ಅರಿವು, ನಾಯಕತ್ವ ಗುಣ, ದೇಶದ ಇತಿಹಾಸ, ಮಾನಸಿಕ ಸಮತೋಲನ, ಆರೋಗ್ಯ ನಿರ್ವಹಣೆ, ಸಮಯ ನಿರ್ವಹಣೆ ಸೇರಿದಂತೆ ಹಲವು ವಿಷಯಗಳ ಕುರಿತು ತರಬೇತಿ ನೀಡಲಾಗುತ್ತಿದೆ.
ಸಂಪನ್ಮೂಲ ವ್ಯಕ್ತಿಗಳು, ನಿವೃತ್ತ ಅಧಿಕಾರಿಗಳು ಹಾಗೂ ವಿವಿಧ ಕ್ಷೇತ್ರಗಳ ಪರಿಣಿತರ ಮೂಲಕ ಮಕ್ಕಳಿಗೆ ಅಧಿಕಾರಿಗಳಲ್ಲಿ ಇರಬೇಕಾದ ಗುಣಲಕ್ಷಣಗಳು, ಮೌಲ್ಯಾಧಾರಿತ ಜೀವನ, ಸಂದರ್ಭಕ್ಕೆ ತಕ್ಕ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ, ಸಂವಹನ ಕೌಶಲ್ಯ, ತಂತ್ರಜ್ಞಾನ ಬಳಕೆ ಹಾಗೂ ದಿನಪತ್ರಿಕೆ ಓದುವ ಅಭ್ಯಾಸದ ಮೂಲಕ ಪ್ರಚಲಿತ ವಿದ್ಯಮಾನಗಳ ಅರಿವು ಮೂಡಿಸಲಾಗುತ್ತದೆ.
ಸುಮಾರು 15 ಭಾನುವಾರಗಳ ಕಾಲ ನಡೆಯುವ ತರಬೇತಿ ಕಾರ್ಯಕ್ರಮದಲ್ಲಿ ಶಾಲಾ ಪಠ್ಯಕ್ರಮದ ಹೊರತಾಗಿಯೂ ಜೀವನ ಕೌಶಲ್ಯಗಳಿಗೆ ಆದ್ಯತೆ ನೀಡಲಾಗುತ್ತದೆ. ವಿವಿಧ ಸರ್ಕಾರಿ ಇಲಾಖೆಗಳ ಕಚೇರಿಗಳಿಗೆ ಭೇಟಿ, ಅಧಿಕಾರಿಗಳೊಂದಿಗೆ ನೇರ ಸಂವಾದ, ಏಕಾಗ್ರತೆ ವೃದ್ಧಿ, ಸಾಮಾನ್ಯ ಜ್ಞಾನ ಮತ್ತು ವ್ಯಕ್ತಿತ್ವ ವಿಕಾಸಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸಲಾಗುತ್ತದೆ.
‘ಯಾವುದೇ ಮಗುವಿನ ಮೇಲೆ ಒತ್ತಡ ಹೇರಿ ಅದರ ಭವಿಷ್ಯವನ್ನು ರೂಪಿಸಲು ಸಾಧ್ಯವಿಲ್ಲ. ಮಗು ಯಾವ ಕ್ಷೇತ್ರದತ್ತ ಆಸಕ್ತಿ ಹೊಂದಿದೆಯೋ, ಅದಕ್ಕೆ ಪೂರಕವಾದ ವಾತಾವರಣ ಮತ್ತು ಮಾರ್ಗದರ್ಶನ ಒದಗಿಸುವುದು ಪಾಲಕರು ಹಾಗೂ ಸಮಾಜದ ಜವಾಬ್ದಾರಿ’ ಎಂಬುದು ಸಂಸ್ಥೆಯ ಕಾರ್ಯಕರ್ತರ ಅಭಿಪ್ರಾಯವಾಗಿದೆ.
ರಾಯಚೂರಿನಲ್ಲಿ ಸಮುತ್ಕರ್ಷದ ಪಯಣ
ಸುಮಾರು 2022ರಲ್ಲಿ ಅಶೋಕ್ ಪಾಟೀಲ್ ಅತನೂರ್ ಹಾಗೂ ಅವರ ತಂಡ ಸಮುತ್ಕರ್ಷ ಸಂಸ್ಥೆಯನ್ನು ರಾಯಚೂರು ಜಿಲ್ಲೆಗೆ ಪರಿಚಯಿಸಿದರು. ಜಿಲ್ಲೆಯ ವಿವಿಧ ತಾಲೂಕುಗಳ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಮಾನ್ವಿಯಿಂದ ಐಶ್ವರ್ಯ ದೇಸಾಯಿ ಎಂಬ ವಿದ್ಯಾರ್ಥಿನಿ ಆಯ್ಕೆಯಾಗಿ, ನಿರಂತರವಾಗಿ 15 ಭಾನುವಾರ ಮಾನ್ವಿಯಿಂದ ರಾಯಚೂರಿಗೆ ತೆರಳಿ ತರಗತಿಗಳನ್ನು ಪೂರ್ಣಗೊಳಿಸಿದರು. ನಂತರ ಅವರು ಸಮುತ್ಕರ್ಷದ ಚಟುವಟಿಕೆಗಳೊಂದಿಗೆ ಸಂಪರ್ಕ ಬೆಳೆಸಿಕೊಂಡರು.
ಕಳೆದ ವರ್ಷ ಮಾನ್ವಿಯ ಕಾಕತೀಯ ಶಾಲೆಯಲ್ಲಿ ಪರಿಚಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ನಡೆದ ಪ್ರವೇಶ ಪರೀಕ್ಷೆಯಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಮಾನ್ವಿಯಲ್ಲಿ ಸಮುತ್ಕರ್ಷದ ಚಟುವಟಿಕೆಗಳಿಗೆ ಉತ್ತಮ ಸ್ಪಂದನೆ ದೊರೆತಿದೆ.
ಪ್ರಸ್ತುತ ಮಾನ್ವಿಯಲ್ಲಿ ಆಯ್ಕೆಯಾದ ಸುಮಾರು 35 ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ರಾಯಚೂರು, ಮಾನ್ವಿ, ಬೆಳಗಾವಿ, ಹಗರಿಬೊಮ್ಮನಹಳ್ಳಿ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಸ್ಥೆಯ ಕಾರ್ಯಕ್ರಮಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ.
ರಾಯಚೂರಿನಲ್ಲಿ ಅಶೋಕ್ ಕುಮಾರ್ ಪಾಟೀಲ್ ಅತನೂರ್ ಅವರೊಂದಿಗೆ ಅರುಣ್–ಜ್ಯೋತಿ ದಂಪತಿ, ಮಾನ್ವಿಯಲ್ಲಿ ಡಾ. ವಿವೇಕಾನಂದ, ನರಸಿಂಹಮೂರ್ತಿ ದೇಸಾಯಿ ಹಾಗೂ ರಜನಿ ಡಿ. ಸೇರಿದಂತೆ ಹಲವು ಕಾರ್ಯಕರ್ತರು ಯಾವುದೇ ಫಲಾಪೇಕ್ಷೆ ಇಲ್ಲದೆ ವಿದ್ಯಾರ್ಥಿಗಳ ಮಾರ್ಗದರ್ಶನ ಮತ್ತು ವ್ಯಕ್ತಿತ್ವ ವಿಕಾಸಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನರಸಿಂಹಮೂರ್ತಿ ದೇಸಾಯಿ ಶಿಕ್ಷಕರು ಹಾಗೂ ಕಾರ್ಯಕರ್ತರು, ಸಮುತ್ಕರ್ಷ ಮಾನ್ವಿ



