ಲಿಂಗಸುಗೂರು: ಪಟ್ಟಣದ 5ನೇ ವಾರ್ಡ್‌ನ ಸಂತೆ ಬಜಾರ್ ಪ್ರದೇಶದಲ್ಲಿರುವ ಮಹಿಳಾ ಶೌಚಾಲಯದ ಸುತ್ತಮುತ್ತ ಸ್ವಚ್ಛತಾ ಕಾರ್ಯ ಆರಂಭಿಸಿರುವುದು ಸ್ವಾಗತಾರ್ಹವಾಗಿದ್ದರೂ, ಶೌಚಾಲಯವನ್ನು ಮಹಿಳೆಯರು ಮುಕ್ತವಾಗಿ ಬಳಸಲು ಅಗತ್ಯವಾದ ಮೂಲಸೌಕರ್ಯಗಳನ್ನು ತಕ್ಷಣ ಕಲ್ಪಿಸಬೇಕು ಎಂದು ಕರ್ನಾಟಕ ಜನಪರ ಹೋರಾಟ ಲಿಂಗಸುಗೂರು ಸಮಿತಿ ಒತ್ತಾಯಿಸಿದೆ.

ಸಂತೆ ಬಜಾರ್‌ನಲ್ಲಿ ಮಹಿಳೆಯರಿಗಾಗಿ ಸೂಕ್ತ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಹಾಗೂ ಮಹಿಳೆಯರು ಕಳೆದ ಸುಮಾರು 20 ವರ್ಷಗಳಿಂದ ಹಲವು ಬಾರಿ ಹೋರಾಟ ನಡೆಸಿ, ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಸಮರ್ಪಕ ಕ್ರಮ ಕೈಗೊಳ್ಳಲಾಗಿರಲಿಲ್ಲ ಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ಜನಪರ ಹೋರಾಟ ಲಿಂಗಸುಗೂರು ಸಮಿತಿ ವತಿಯಿಂದ ಒಂದು ವಾರದ ಹಿಂದೆ ಪುರಸಭೆಗೆ ಮನವಿ ಸಲ್ಲಿಸಿ ಸಮಸ್ಯೆಯ ಕುರಿತು ಅಧಿಕಾರಿಗಳ ಗಮನ ಸೆಳೆಯಲಾಗಿತ್ತು. ಅದರ ಪರಿಣಾಮವಾಗಿ ಪುರಸಭೆ ಸಿಬ್ಬಂದಿ ಜೆಸಿಬಿ ಯಂತ್ರದ ಸಹಾಯದಿಂದ ಮಹಿಳಾ ಶೌಚಾಲಯದ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸುವ ಕಾರ್ಯ ಆರಂಭಿಸಿದ್ದಾರೆ.

ಸ್ವಚ್ಛತಾ ಕಾರ್ಯಕ್ಕೆ ಚಾಲನೆ ದೊರೆತಿರುವುದು ಸಮಿತಿಯ ನಿರಂತರ ಒತ್ತಾಯಕ್ಕೆ ಸಿಕ್ಕ ಪ್ರಾಥಮಿಕ ಸ್ಪಂದನೆಯಾಗಿದೆ. ಆದರೆ ಸಮಸ್ಯೆ ಕೇವಲ ಸ್ವಚ್ಛತೆಯಲ್ಲೇ ಸೀಮಿತವಾಗಿಲ್ಲ. ನೀರು, ಬೆಳಕು, ಬಾಗಿಲು, ಸುರಕ್ಷತೆ ಹಾಗೂ ನಿಯಮಿತ ನಿರ್ವಹಣೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿ ಶೌಚಾಲಯವನ್ನು ಸಂಪೂರ್ಣವಾಗಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕು ಎಂದು ಸಮಿತಿ ಆಗ್ರಹಿಸಿದೆ.

ಸಂತೆ ಬಜಾರ್‌ಗೆ ಪ್ರತಿದಿನ ವ್ಯಾಪಾರಕ್ಕಾಗಿ ಆಗಮಿಸುವ ಮಹಿಳೆಯರು ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪುರಸಭೆ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಗೌರವಾಧ್ಯಕ್ಷ ಮೈಬೂಬ್ ಪಾಷಾ ಮನಿಯಾರ್, ಕಾರ್ಯಾಧ್ಯಕ್ಷ ಬಾಬಾಜಾನಿ, ವಿಶ್ವ ನಾಯ್ಡು, ರವಿಕುಮಾರ್, ವಿಜಯಕುಮಾರ್ ಮೇಟಿ, ಮೌನೇಶ್ ಬುಳ್ಳಾಪುರ, ಖಾದರ್ ಭಾಷಾ ಸೇರಿದಂತೆ ಇತರರು ಉಪಸ್ಥಿತರಿದ್ದರು.