ದೇವದುರ್ಗ: ರಂಗಭೂಮಿ ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಪ್ರಮುಖ ಮಾಧ್ಯಮವಾಗಿದ್ದು, ಸಮಾಜದ ಸಮಸ್ಯೆಗಳು ಹಾಗೂ ಮಾನವೀಯ ಮೌಲ್ಯಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಶಕ್ತಿ ಹೊಂದಿದೆ ಎಂದು ಗಬ್ಬೂರಿನ ನಿವೃತ್ತ ಶಿಕ್ಷಕ ಪ್ರಕಾಶ್ ಗದ್ದೆ ಹೇಳಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ, ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಹೇರೂರು ಚಂದ್ರಾಯಗೌಡ ಮಲ್ಹಾರ ಸಿದ್ದಪ್ಪಗೌಡ ಕರೆಡ್ಡಿ ಶಿಕ್ಷಣ ಮಹಾವಿದ್ಯಾಲಯ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ದೇವದುರ್ಗ ತಾಲೂಕಿನ ಗಬ್ಬೂರಿನ ಎಸ್ಎಲ್ಡಿ ಪಬ್ಲಿಕ್ ಶಾಲೆಯಲ್ಲಿ ನಡೆಯುತ್ತಿರುವ ವಾರ್ಷಿಕ ವಿಶೇಷ ಶಿಬಿರದ ಐದನೇ ದಿನ “ರಂಗಭೂಮಿಯ ಅಳಿವು-ಉಳಿವು” ವಿಷಯದ ಕುರಿತು ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಧುನಿಕ ತಂತ್ರಜ್ಞಾನ ಮತ್ತು ಬದಲಾಗುತ್ತಿರುವ ಜೀವನಶೈಲಿಯಿಂದ ರಂಗಭೂಮಿ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಯುವಜನರು ರಂಗಕಲೆಯತ್ತ ಆಸಕ್ತಿ ಬೆಳೆಸಿಕೊಂಡು ಅದರ ಸಂರಕ್ಷಣೆ ಹಾಗೂ ಬೆಳವಣಿಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ರಂಗಕಲೆಯು ಕಲಿಕೆ, ಅನುಭವ ಮತ್ತು ವ್ಯಕ್ತಿತ್ವ ವಿಕಾಸಕ್ಕೆ ಅವಕಾಶ ನೀಡುವ ರಂಗಭೂಮಿಯ ವಿಶ್ವವಿದ್ಯಾಲಯದಂತಿದೆ ಎಂದು ಹೇಳಿದರು.
ಸಾಹಿತಿ ದಾನಮ್ಮ ಸುಭಾಷಚಂದ್ರ ಮಾತನಾಡಿ, ರಂಗಭೂಮಿ ಕೇವಲ ಮನರಂಜನೆಗೆ ಸೀಮಿತವಾಗಿಲ್ಲ. ಸಮಾಜದ ಸಮಸ್ಯೆಗಳನ್ನು ಜನರ ಮುಂದಿಟ್ಟು ಅರಿವು ಮೂಡಿಸುವ ಪರಿಣಾಮಕಾರಿ ಕಲಾ ಮಾಧ್ಯಮವಾಗಿದೆ ಎಂದರು.
ನಿವೃತ್ತ ಪೊಲೀಸ್ ಅಧಿಕಾರಿ ರಾಜಶೇಖರ ಮಾತನಾಡಿ, ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ರಂಗಭೂಮಿಯ ಕೊಡುಗೆ ಮಹತ್ವದ್ದಾಗಿದ್ದು, ಕಲಾವಿದರು ಹಾಗೂ ಯುವಜನರು ರಂಗಕಲೆಯ ಉಳಿವಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಮಂಜುನಾಥ ಪಾಟೀಲ ವಟಗಲ ಮಾತನಾಡಿ, ರಂಗಭೂಮಿಯಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಆತ್ಮವಿಶ್ವಾಸ, ಸಂವಹನ ಕೌಶಲ್ಯ ಹಾಗೂ ಸಾಮಾಜಿಕ ಜವಾಬ್ದಾರಿ ಬೆಳೆಯುತ್ತದೆ ಎಂದರು.
ಹಿರಿಯ ಉಪನ್ಯಾಸಕಿ ಹಂಪಮ್ಮ ಮಾತನಾಡಿ, ಶಿಕ್ಷಣದೊಂದಿಗೆ ರಂಗಚಟುವಟಿಕೆಗಳನ್ನು ಬೆಸೆಯುವುದರಿಂದ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ನೆರವಾಗುತ್ತದೆ ಎಂದು ಹೇಳಿದರು.
ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಶಶಿಕುಮಾರ ಮಾತನಾಡಿ, ವಿಶೇಷ ಶಿಬಿರಗಳಲ್ಲಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವುದರಿಂದ ಪ್ರಶಿಕ್ಷಣಾರ್ಥಿಗಳಲ್ಲಿ ಸೇವಾ ಮನೋಭಾವ ಮತ್ತು ಸಮಾಜಮುಖಿ ಚಿಂತನೆ ಬೆಳೆಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಗೌರವಾಧ್ಯಕ್ಷ ಹರವಿ ನಾಗನಗೌಡ, ರಂಗಭೂಮಿ ನಮ್ಮ ಪರಂಪರೆಯ ಪ್ರತಿಬಿಂಬವಾಗಿದ್ದು, ಅದನ್ನು ಉಳಿಸಿ ಬೆಳೆಸುವುದು ಎಲ್ಲರ ಜವಾಬ್ದಾರಿ ಎಂದು ಹೇಳಿದರು.
ಕಾರ್ಯಕ್ರಮದ ಸಂಯೋಜಕ ಡಾ. ಸಿದ್ಧರಾಮಯ್ಯ ಹಿರೇಮಠ, ಉಪನ್ಯಾಸಕರಾದ ವೀರನಗೌಡ, ಹೇಮರೆಡ್ಡಿ ಪಾಟೀಲ, ಉತ್ತಪ್ಪ ಕೆ., ಈರಪ್ಪ ಸರ್ಜಾಪುರ ಹಾಗೂ ಎನ್ಎಸ್ಎಸ್ ಶಿಬಿರದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.



