ಮಾನ್ವಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಕುರಿತು ಉಂಟಾಗಿರುವ ಗಂಭೀರ ಅನುಮಾನಗಳು ಮತ್ತು ಆಕ್ಷೇಪಗಳ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಆಗ್ರಹಿಸಿದೆ. ಜ್ಞಾನೇಶ್ ಕುಮಾರ್ ಪ್ರಸ್ತುತ ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿದ್ದಾರೆ.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಪದಾಧಿಕಾರಿಗಳು ರಾಷ್ಟ್ರಪತಿಗಳಿಗೆ ಸಲ್ಲಿಸುವ ಮನವಿಯನ್ನು ಗ್ರೇಡ್ ತಹಶೀಲ್ದಾರ್ ಅಬ್ದುಲ್ ವಾಹಿದ್ ಅವರಿಗೆ ನೀಡಿದರು.
ಈ ವೇಳೆ ಸಂಘಟನೆಯ ತಾಲೂಕು ಅಧ್ಯಕ್ಷ ನಾಸಿರ್ ಅಲಿ ಮಾತನಾಡಿ, ಭಾರತದ ಸಂವಿಧಾನ ಅರ್ಹ ನಾಗರಿಕರಿಗೆ ಮತದಾನದ ಹಕ್ಕು ನೀಡಿದ್ದು, ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಗಳು ಪ್ರಜಾಪ್ರಭುತ್ವದ ಮೂಲಾಧಾರವಾಗಿವೆ. ಆದ್ದರಿಂದ ಮತದಾರರ ಪಟ್ಟಿಯ ತಯಾರಿ, ತಿದ್ದುಪಡಿ, ಸೇರ್ಪಡೆ ಹಾಗೂ ಹೆಸರು ತೆಗೆದುಹಾಕುವ ಪ್ರಕ್ರಿಯೆಗಳು ಕಾನೂನುಬದ್ಧ ಮತ್ತು ಪರಿಶೀಲಿಸಬಹುದಾದ ರೀತಿಯಲ್ಲಿ ನಡೆಯಬೇಕು ಎಂದು ಹೇಳಿದರು.
ಎಸ್ಐಆರ್ ಪ್ರಕ್ರಿಯೆಯಲ್ಲಿ ದೊಡ್ಡ ಸಂಖ್ಯೆಯ ಮತದಾರರನ್ನು ವಿವಿಧ ವರ್ಗಗಳಲ್ಲಿ ಗುರುತಿಸಲಾಗಿದ್ದು, ಲಕ್ಷಾಂತರ ಮತದಾರರಿಗೆ ನೋಟಿಸ್ ನೀಡಲಾಗಿದೆ ಎಂದು ಅವರು ಆರೋಪಿಸಿದರು. ಈ ಪ್ರಕ್ರಿಯೆಯಿಂದ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯುವ ಆತಂಕ ಉಂಟಾಗಿದೆ ಎಂದು ಹೇಳಿದರು.
ಕೆಲವು ಕ್ಷೇತ್ರಗಳಲ್ಲಿ ಮತದಾರರ ಹೆಸರನ್ನು ತೆಗೆದುಹಾಕಲು ನಮೂನೆ-7 ದುರುಪಯೋಗವಾಗುತ್ತಿದೆ ಎಂಬ ಆರೋಪಗಳ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎಸ್ಐಆರ್ ಪ್ರಕ್ರಿಯೆಯನ್ನು ರದ್ದುಪಡಿಸಬೇಕು, ಈ ಪ್ರಕ್ರಿಯೆಯಲ್ಲಿ ಹೆಸರು ಕೈಬಿಟ್ಟಿರುವ ಅರ್ಹ ಮತದಾರರ ಹೆಸರುಗಳನ್ನು ಮರು ಸೇರ್ಪಡೆಗೊಳಿಸಬೇಕು ಹಾಗೂ ಮತದಾರರಿಗೆ ಪರಿಣಾಮಕಾರಿ ಮೇಲ್ಮನವಿ ಮತ್ತು ಮರುಪರಿಶೀಲನಾ ವ್ಯವಸ್ಥೆ ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಇದಲ್ಲದೆ, ನಮೂನೆ-6ರಲ್ಲಿ ಮಾಡಲಾಗಿದೆ ಎನ್ನಲಾಗುತ್ತಿರುವ ಬದಲಾವಣೆಗಳ ಕಾನೂನುಬದ್ಧತೆ ಹಾಗೂ ಅವುಗಳನ್ನು ಜಾರಿಗೆ ತಂದ ವಿಧಾನವನ್ನು ಪರಿಶೀಲಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಉದ್ಭವಿಸಿರುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ದೊರೆಯಬೇಕು. ಈ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ನಾಸಿರ್ ಅಲಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕು ಉಪಾಧ್ಯಕ್ಷ ಇಮ್ರಾನ್ ಖಾನ್, ಶೈಖ್ ಬಾಬಾ ಹುಸೇನ್, ಮುಹಮ್ಮದ್ ಹಾರೂನ್, ಅಬ್ದುಲ್ ಹಸೀಬ್, ಇರ್ಶಾದ್ ಖಾನ್, ಜಬ್ಬಾರ್, ಶೇಖ್ ಆಸಿಫ್, ಲಾಲಾ ಮಿಯಾ, ಹುಸೇನ್ ಸಾಬ್, ಸಮೀರ್ ಪಾಶಾ, ಶೇಖ್ ಮಹೆಬೂಬ್, ಎಂ. ಮಹಬೂಬ್, ದಸ್ತಗೀರ್ ಸಾಬ್, ಹನೀಫ್, ಎಂ.ಡಿ. ಆಫೀಸ್, ಮಹಮ್ಮದ್ ಅಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.



